ತಂಬಾಕು ಕಂಪನಿಗಳೊಂದಿಗೆ ಸಹಭಾಗಿತ್ವ ಬೇಡ; ಉಡುಪಿ ಡಿಸಿ ಎಚ್ಚರಿಕೆ
ಉಡುಪಿ, ಜುಲೈ 10: ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕಂಪೆನಿಗಳೊಂದಿಗಿನ ಸಹಭಾಗಿತ್ವದಲ್ಲಿ ಸರಕಾರಿ ಇಲಾಖೆಗಳು ಯಾವುದೇ ಸಮಾರಂಭ ನಡೆಸಕೂಡದು ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂತಹ ಕಂಪನಿಗಳಿಂದ ಅನುದಾನ, ಪರಿಕರಗಳನ್ನು ಪಡೆಯಬಾರದು. ಇದು ವಿಶ್ವ ಆರೋಗ್ಯ ಸಂಸ್ಥೆಯ ಎಫ್ ಸಿಟಿಸಿ ನಿಯಮದ ಉಲ್ಲಂಘನೆಯಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಜಿಲ್ಲಾ ತಂಬಾಕು ನಿಷೇಧ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ಉದ್ದೇಶದಿಂದ ಸರಕಾರಿ ಸಂಸ್ಥೆಗಳೊಂದಿಗೆ ಸೇರಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯಿದ್ದು, ಇದರಿಂದ ತಂಬಾಕು ಉತ್ಪನ್ನಗಳ ಬಳಕೆಗೆ ನಾವೇ ಸಹಕಾರ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಶ್ವ ಆರೋಗ್ಯ ಸಂಸ್ಥೆಯ ಎಫ್ ಸಿಟಿಸಿ ನಿಯಮಗಳ ಕುರಿತಂತೆ ಎಲ್ಲ ಕಚೇರಿಗಳಲ್ಲಿ ಫಲಕಗಳನ್ನು ಅಳವಡಿಸಬೇಕು. ಈ ಫಲಕಗಳನ್ನು ಆರೋಗ್ಯ ಇಲಾಖೆ ಮೂಲಕ ಪಡೆಯಿರಿ ಎಂದು ತಿಳಿಸಿದರು.
ಕಾಪು ಮತ್ತು ಮಲ್ಪೆ ಸಮುದ್ರ ತೀರದಲ್ಲಿ ಧೂಮಪಾನ ಮುಕ್ತ ಸಮುದ್ರ ತೀರ ಎಂಬ ನಾಮಫಲಕಗಳನ್ನು ಅಳವಡಿಸಲಾಗಿದೆ. ವಿಶ್ವ ತಂಬಾಕು ರಹಿತ ದಿನದಂದು ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಟ್ಪಾ ನಿಯಂತ್ರಣ ತನಿಖಾ ದಳವು 2019ರ ಏಪ್ರಿಲ್ ನಿಂದ ಜೂನ್ ವರೆಗೆ ಉಡುಪಿಯಲ್ಲಿ ಒಟ್ಟು 426 ಪ್ರಕರಣಗಳನ್ನು ದಾಖಲಿಸಿ 45,550 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.












Click it and Unblock the Notifications