ತಾಕತ್ತಿದ್ದರೆ ವಿದ್ಯುತ್ ಕೊಡಿ, ಸಿಎಂಗೆ ಶೋಭಾ ಸವಾಲ್
ಉಡುಪಿ, ಮೇ 9: ರಾಜ್ಯ ಸರಕಾರದ ಸಚಿವ ಸಂಪುಟ ಸದಸ್ಯರ ನಡುವೆ ಹೊಂದಾಣಿಕೆಯಿಲ್ಲ. ನಿಮ್ಮ ಸರಕಾರದ ಸಮಸ್ಯೆಯನ್ನು ಬಿಜೆಪಿ ಸರಕಾರದ ಮೇಲೆ ಹೊರಿಸಬೇಡಿ. ತಾಕತ್ತಿದ್ದರೆ ವಿದ್ಯುತ್ ಕೊಡಿ, ಇಲ್ಲದಿದ್ದಲ್ಲಿ ರಾಜೀನಾಮೆ ನೀಡಿ ಎಂದು ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸವಾಲೆಸೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ ಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯದಿಂದ ವಿದ್ಯುತ್ ಸಮಸ್ಯೆ ಗಂಭೀರವಾಗುತ್ತಿದೆ. ಇಂಧನ ಇಲಾಖೆಯ ಅಧಿಕಾರಿಗಳಿಗೆ ಸಚಿವ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡುವುದನ್ನು ಬಿಟ್ಟು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆಂದು ಶೋಭಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಉಡುಪಿಯಲ್ಲಿ ಶುಕ್ರವಾರ (ಮೇ 9) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶೋಭಾ, ವಸ್ತುಸ್ಥಿತಿಯನ್ನು ಸರಿಯಾಗಿ ಅರಿಯದೇ ಸಿದ್ದರಾಮಯ್ಯನವರು ನನ್ನ ಮೇಲೆ ಗೂಬೆ ಕೂರಿಸುತ್ತಿರುವುದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದಿದ್ದಾರೆ.
ನನ್ನ ಅಧಿಕಾರದ ಅವಧಿಯಲ್ಲಿ ಇಲಾಖೆಯ ಎಲ್ಲಾ ಕಡತಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿದ್ದೇನೆ. ವಿದ್ಯುತ್ ಸಮಸ್ಯೆಗೆ ಶೋಭಾ ಕಾರಣವೆಂದರೆ, ನಾನೇನು ಕೆಇಬಿ ಫ್ಯೂಸ್ ಅನ್ನು ಮನೆಯಲ್ಲಿ ಇಟ್ಟುಕೊಂಡಿದ್ದೀನಾ ಎಂದು ಶೋಭಾ ಬೇಸರ ವ್ಯಕ್ತ ಪಡಿಸಿದ್ದಾರೆ.
ನನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಮತ್ತು ಅಧಿಕಾರಿಗಳ ಜೊತೆ ಬೆರೆತು ವಿದ್ಯುತ್ ಸಮಸ್ಯೆ ಬಗೆಹರಿಸಲು ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದೇನೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಶೋಭಾ ಹೇಳಿದ್ದಾರೆ.
ಇಂದು ರಾಜ್ಯ ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಹಿಂದಿನ ಬಿಜೆಪಿ ಸರಕಾರ ಕಾರಣ. ಆ ಸಮಯದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿದ್ಯುತ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.












Click it and Unblock the Notifications