ಕೊಲ್ಲೂರಿನಲ್ಲಿ ಡಿಕೆಶಿ ಹರಕೆಯ ಚಂಡಿಕಾಯಾಗದ ಪೂರ್ಣಾಹುತಿ: ಸಿಎಂ ಗಾದಿಗಾಗಿ ವಿಶೇಷ ಪ್ರಾರ್ಥನೆ
ಉಡುಪಿ, ಏಪ್ರಿಲ್ 24: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಟೆಂಪಲ್ ರನ್ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರಿನ ನಂತರ ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ನವ ಚಂಡಿಕಾಯಾಗವನ್ನು ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ.
ಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್ ಕುಟುಂಬದ ಪರವಾಗಿ ಪುರೋಹಿತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದರಲ್ಲಿ 'ಮುಖ್ಯಮಂತ್ರಿ ಸ್ಥಾನೇ' ಎಂದು ಪುರೋಹಿತರು ಹೇಳಿದ ಮಂತ್ರ ಪಠಣ ಈಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕೊಲ್ಲೂರು ಮತ್ತು ಶೃಂಗೇರಿಯಲ್ಲಿ ಚಂಡಿಕಾ ಹೋಮವನ್ನು ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ. ಕನಕಪುರ ಅಧಿನಾಯಕೇ, ಕುಟುಂಬದ ಮನೋಭಿಲಾಶೆ ಈಡೇರಬೇಕು, ಜೊತೆಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಪುರೋಹಿತರು ಪ್ರಾರ್ಥನೆ ಸಲ್ಲಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದ ನಂತರ ಉಡುಪಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು 'ಕೊಲ್ಲೂರಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದೀರಾ' ಎನ್ನುವ ಮಾಧ್ಯಮದವರ ಪ್ರಶ್ನೆಗೆ, "ನೋಡಪ್ಪಾ.. ನಾವು ರಾಜಕಾರಣಿಗಳು, ಬಿಳಿ ಬಟ್ಟೆ ಹಾಕಿಕೊಂಡಿದ್ದೇನೆ, ಖಾವಿ ಹಾಕಿಕೊಂಡಿಲ್ಲ"ಎಂದು ಹೇಳಿದರು.

"ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಯತ್ನಾಳ್, ಓಲೇಕರ್, ಕೆಂಪಣ್ಣ, ವಿಶ್ವನಾಥ್ ಮುಂತಾದವರೇ ಹೇಳಿದ್ದರು. ಅದ್ಯಾವುದೂ ನಮ್ಮ ಕಾಲದಲ್ಲಿ ಆಗಿದ್ದಲ್ಲ, ಇಂತಹ ಭ್ರಷ್ಟ ಸರಕಾರ ನಮ್ಮ ರಾಜ್ಯವನ್ನು ಆಳಿದ್ದು ಒಂದು ಕಪ್ಪು ಇತಿಹಾಸ" ಎಂದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ನಾವು ಲಿಂಗಾಯತ ಸಮುದಾಯದ ಬಗ್ಗೆ ಮಾತಾನಾಡಿದ್ದಲ್ಲ, ಸರಕಾರದ ಬಗ್ಗೆ ಮಾತನಾಡಿದ್ದು. ಉಡುಪಿಯ ಜನತೆ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಬೇಕು, ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಬೇಕು. ಆ ಮೂಲಕ ಭ್ರಷ್ಟ ಬಿಜೆಪಿಯನ್ನು ತೊಲಗಿಸಲು ನಮಗೆ ಶಕ್ತಿ ನೀಡಬೇಕೆಂದು" ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿದರು.

ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ಟೆಂಪಲ್ ರನ್, ಹೋಮ-ಹವನ
ಶನಿವಾರ (ಏಪ್ರಿಲ್ 22) ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿ.ಕೆ ಶಿವಕುಮಾರ್, ಸಂಜೆ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಪತ್ನಿಯೊಂದಿಗೆ ಚಂಡಿಕಾ ಯಾಗದ ಸಂಕಲ್ಪ ಮಾಡಿದ್ದರು. ಡಿ.ಕೆ ಶಿವಕುಮಾರ್ ಆಪ್ತ ಖ್ಯಾತ ಜ್ಯೋತಿಷಿ ದ್ವಾರಕನಾಥ್ ನೇತೃತ್ವದಲ್ಲಿ ಭಾನುವಾರ ( ಏಪ್ರಿಲ್ 23) ಶಾರದಾಂಬೆಯ ಸನ್ನಿಧಿಯಲ್ಲಿ ಚಂಡಿಕಾಯಾಗ ನಡೆಸಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ಋತ್ವಿಜರು ಹಾಗೂ ಪುರೋಹಿತರನ್ನು ಒಳಗೊಂಡ ತಂಡ ಶೃಂಗೇರಿ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಅವರ ಚಂಡಿಕಾಯಾಗ ನಡೆಸಿದ್ದರು.
ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನದ ನಂತರ ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕರಾದ 'ಹವ್ಯಕ ವೇದರತ್ನ' ಪುರಸ್ಕೃತ ವೇದ ಮೂರ್ತಿ ಶ್ರೀಧರ ಅಡಿಗರ ಮನೆಗೆ ಡಿ.ಕೆ ಶಿವಕುಮಾರ್ ತಮ್ಮ ಪತ್ನಿಯೊಡನೆ ಭೇಟಿ ನೀಡಿ, ಶ್ರೀಧರ ಅಡಿಗರ ಜೊತೆ ಮಾತುಕತೆ ನಡೆಸಿದರು. ನಂತರ ಡಿ.ಕೆ ಶಿವಕುಮಾರ್ ತಮ್ಮ ಕುಟುಂಬಸ್ಥರೊಡನೆ ಕುಂದಾಪುರ ಸಮೀಪದ ಹಟ್ಟಿ ಅಂಗಡಿಯ ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಿದ್ದಿವಿನಾಯಕನ ಬಳಿ ನಾಡಿನ ಒಳಿತಿಗಾಗಿ, ಶಾಂತಿ-ಸಮೃದ್ಧಿಗಾಗಿ ಪ್ರಾರ್ಥಿಸಿರುವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ತಮ್ಮ ಟೆಂಪಲ್ ರನ್ ಮುಂದುವರಿಸಿದ ಡಿ.ಕೆ ಶಿವಕುಮಾರ್ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದರು.












Click it and Unblock the Notifications