Dengue Fever: ಉಡುಪಿಯಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಪ್ರಕರಣಗಳು, ಆರೋಗ್ಯಾಧಿಕಾರಿಗಳ ಆತಂಕ
ಉಡುಪಿ, ಏಪ್ರಿಲ್. 29: ಇತ್ತೀಚೆನ ಮಳೆಯ ನಂತರ ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣಗಳನ್ನು ಏಕಾಏಕಿ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಇಲಾಖೆ ಸಮಗ್ರ ಲಾರ್ವಾ ಸಮೀಕ್ಷೆ ಪ್ರಾರಂಭಿಸಿದೆ.
ಲಾರ್ವಾಗಳ ಹಾವಳಿ ಹೆಚ್ಚಿರುವ ಶಂಕೆ ಇರುವ ನಗರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ಜಿಲ್ಲೆಯಾದ್ಯಂತ ಲಾರ್ವಾ ನಿವಾರಕ ಹಾಗೂ ಸೊಳ್ಳೆ ನಿರ್ಮೂಲನಾ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದೆ. ಈ ವರ್ಷದ ಜನವರಿಯಿಂದ ಉಡುಪಿಯಲ್ಲಿ ಈಗಾಗಲೇ 47 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ ಉಡುಪಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 635. ಉಡುಪಿಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಪ್ರಶಾಂತ್ ಭಟ್, ವಿಶೇಷವಾಗಿ ಮಳೆಗಾಲ ಸಮೀಪಿಸುತ್ತಿರುವಂತೆ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ನೀರು ನಿಲ್ಲದಂತೆ ತಡೆಯುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
"ಲಾರ್ವಾಗಳು ಸಾಮಾನ್ಯವಾಗಿ ಬಳಕೆಯಾಗದ ಸಿಹಿನೀರು, ಏರ್ ಕೂಲರ್‌ಗಳು ಮತ್ತು ಬಿಸಾಡಿದ ಟೈರ್‌ಗಳಲ್ಲಿ ಕಂಡುಬರುತ್ತವೆ. ಈ ಸಂತಾನವೃದ್ಧಿ ಸ್ಥಳಗಳ ಆರಂಭಿಕ ಪತ್ತೆ ಮತ್ತು ಲಾರ್ವಾ ನಿರ್ಮೂಲನೆ ಮಾಡುವುದು ನಿರ್ಣಾಯಕವಾಗಿದೆ" ಎಂದು ಡಾ ಪ್ರಶಾಂತ್ ಭಟ್ ಹೇಳಿದ್ದಾರೆ.

ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಡುಪಿ ನಗರ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣಗೊಂಡಿದ್ದವು. ಹೀಗಾಗಿ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು, ಸಮುದಾಯ ವೈದ್ಯಕೀಯ ಇಲಾಖೆ, ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ (DVBDCP), ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸೊಳ್ಳೆ ನಿಯಂತ್ರಣ ಯೋಜನೆಗಳನ್ನು ಮಾಡಲಾಗುತ್ತಿದೆ.
ಡೆಂಗ್ಯೂ ಹರಡುವುದನ್ನು ತಡೆಯಲು ಈ ವರ್ಷವೂ ಇದೇ ರೀತಿಯ ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದೆ. 2022ರಲ್ಲಿ 513 ಪ್ರಕರಣಗಳು, 2021ರಲ್ಲಿ 380 ಪ್ರಕರಣಗಳು, 2020ರಲ್ಲಿ 139 ಪ್ರಕರಣಗಳು ವರದಿಯಾಗಿವೆ.












Click it and Unblock the Notifications