2ನೇ ಡೋಸ್ ಲಸಿಕೆ ಕಡ್ಡಾಯ; ಬಸ್ ಟಿಕೆಟ್ ಮೂಲಕ ಜಾಗೃತಿ
ಉಡುಪಿ, ಡಿಸೆಂಬರ್ 13; ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಕೋವಿಡ್ ಲಸಿಕೆಗೆ ಮತ್ತೆ ಬೇಡಿಕೆ ಬಂದಿದೆ. ಒಂದು ಡೋಸ್ ಲಸಿಕೆ ಪಡೆದು ಸುಮ್ಮನಾಗಿದ್ದ ಜನರಿಗೆ 2ನೇ ಡೋಸ್ ಕಡ್ಡಾಯವಾಗಿ ಪಡೆದಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ 1 ನೇ ಹಾಗೂ 2 ನೇ ಡೋಸ್ ವಿತರಣೆಯಲ್ಲಿ ಶೇ 100ರಷ್ಟು ಗುರಿ ಸಾಧಿಸಲು ಜಿಲ್ಲಾಡಳಿವು ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳ ಟಿಕೆಟ್‌ಗಳಲ್ಲಿ '2 ಡೋಸ್ ಕೋವಿಡ್ -19 ಲಸಿಕೆ ಕಡ್ಡಾಯ' 'ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು' ಎಂಬ ಬರಹಗಳನ್ನು ಮುದ್ರಿಸಿ ಜಾಗೃತಿ ಮೂಡಿಸುತ್ತಿದೆ.

ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೀನ ಶೈಲಿಯ ಯೋಜನೆಯನ್ನು ಹಮ್ಮಿಕೊಂಡಿರುವ ಸಾರಿಗೆ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಇತರ ಇಲಾಖೆಗಳು/ ನಿಗಮಗಳು ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಮಾಲ್‌ಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಮತ್ತು ಎಲ್ಲಾ ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್ಲು/ ಸ್ವೀಕೃತಿಗಳಲ್ಲಿ ಇದೇ ಮಾದರಿಯಲ್ಲಿ ಜಾಗೃತಿ ಮೂಡಿಸುವ ಬರಹಗಳನ್ನು ಮುದ್ರಿಸುವಂತೆ ಮನವಿ ಮಾಡಿದ್ದಾರೆ.
ಮನೆ ಮನೆಗೆ ಲಸಿಕಾ ಮಿತ್ರ; ಉಡುಪಿ ಜಿಲ್ಲಾಡಳಿತ ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳಲ್ಲಿ ಮನೆ ಮನೆಗೆ ಲಸಿಕಾ ಮಿತ್ರ ಸಹ ಒಂದು.
ಮೊದಲ ಡೋಸ್ ಪಡೆದವರು ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಂಡಿದ್ದು, ಕೋವಿಡ್ ಸೋಂಕು ತಗುಲಿದರೂ ನಮಗೆ ಯಾವುದೇ ಅಪಾಯವಿಲ್ಲ ಎರಡನೇ ಡೋಸ್ ಪಡೆಯಬೇಕಾಗಿಲ್ಲ ಎಂಬ ಭಾವನೆಯಿಂದ ಅವಧಿ ಮೀರಿದ್ದರೂ ಲಸಿಕಾ ಕೇಂದ್ರಗಳಿಗೆ ಬರುತ್ತಿರಲಿಲ್ಲ.
ಜಿಲ್ಲಾಡಳಿತ ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ಆರಂಭಿಸಿ ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ ಅವರ ಮನವೊಲಿಸಿ ಲಸಿಕೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ನವೆಂಬರ್ 22 ರಿಂದ 30 ರವರಗೆ ಜಿಲ್ಲೆಯ ಪ್ರತಿ ಮನೆಗಳನ್ನು ಜಿಲ್ಲೆಯ ಮತದಾರರ ಪಟ್ಟಿಯೊಂದಿಗೆ ಭೇಟಿ ನೀಡುವ ಮೂಲಕ ಲಸಿಕೆ ಪಡೆದಿರುವ ಮತ್ತು ಪಡೆಯದಿರುವವರ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಜಿಲ್ಲೆಯ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯ 158 ಗ್ರಾಮ ಪಂಚಾಯತಿಗಳ 1111 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 1011885 ಮಂದಿ 18 ವರ್ಷ ಮೇಲ್ಪಟ್ಟವರಿದ್ದು, ಹೊರ ಜಿಲ್ಲೆ/ ರಾಜ್ಯ/ ದೇಶದಲ್ಲಿ 96377 ಮಂದಿ ಇದ್ದಾರೆ. ಮೃತಪಟ್ಟವರು ಮತ್ತು ಜಿಲ್ಲೆಯಿಂದ ಹೊರಗಿರುವವರನ್ನು ಹೊರತುಪಡಿಸಿದರೆ ಒಟ್ಟು ಪ್ರಸ್ತುತ 897728 ಮಂದಿ ಪ್ರಥಮ ಡೋಸ್ ಪಡೆಯುವ ಅರ್ಹ ನಾಗರೀಕರಿದ್ದು, ಇದರಲ್ಲಿ 870423 ಮಂದಿ ಈಗಾಗಲೇ ಪ್ರಥಮ ಡೋಸ್ , 738220 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
27305 ಮಂದಿ ಪ್ರಥಮ ಡೋಸ್ ಮತ್ತು 132203 ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದ್ದಾರೆ ಎಂದು ಗುರುತಿಸಲಾಗಿತ್ತು. ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದು ಹೊರ ಜಿಲ್ಲೆ/ ರಾಜ್ಯಗಳಿಗೆ ತೆರಳಿರುವ ನಾಗರೀಕರು ತಾವು ಇರುವಲ್ಲಿಯೇ 2 ನೇ ಡೋಸ್ ಲಸಿಕೆ ಪಡೆಯಬೇಕು, ಇದುವರೆಗೂ ಪ್ರಥಮ ಡೋಸ್ ಪಡೆಯಲು ಬಾಕಿ ಇರುವ ಹಾಗೂ ಎರಡನೇ ಡೋಸ್ ಪಡೆಯಲು ಅರ್ಹರಿರುವ ಸಾರ್ವಜನಿಕರು ಆದ್ಯತೆಯ ಮೇಲೆ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಲಾಗಿತ್ತು.
ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ 2 ಡೋಸ್ ಕೋವಿಡ್ ಲಸಿಕೆ ನೀಡಿ ಅವರನ್ನು ಕೋವಿಡ್ ನಿಂದ ರಕ್ಷಿಸುವುದು ಹಾಗೂ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ , ಮತದಾರರ ಪಟ್ಟಿಯ ಮೂಲಕ ಮನೆ ಮನೆ ಭೇಟಿ ನೀಡಿ ,ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಲಾಗಿತ್ತು.
ಇದುವರೆಗೂ ಲಸಿಕೆ ಪಡೆಯದವರ ಮನವೊಲಿಸಿ ,ಲಸಿಕೆಯ ಮಹತ್ವ ತಿಳಿಸಿ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಸಮುದಾಯಗಳ ಮುಖಂಡರು ,ಸಂಘ ಸಂಸ್ಥೆಗಳೂ ಹಾಗೂ ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯು ಶೀಘ್ರದಲ್ಲಿ ಲಸಿಕಾಕರಣದಲ್ಲಿ ಶೇ 100ರ ಗುರಿ ತಲುಪಲಿದೆ ಎಂದು ಜಿಲ್ಲಾಡಳಿತ ಹೇಳಿದೆ.












Click it and Unblock the Notifications