ಆಯುಧ ಪೂಜೆ ದಿನ ಮದುವೆ, ಯುಗಾದಿಗೆ ತಿಥಿ: ಶಂಕರಣ್ಣನ ಬದುಕು ಹೀಗ್ಯಾಕಾಯ್ತು?
ಬೆಂಗಳೂರು, ಮಾ. 29: ಇನ್ನೇನು ವೃದ್ಯಾಪ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿ 24 ವರ್ಷದ ಯುವತಿ ಜತೆ ಮದುವೆಯಾಗಿ ಸುದ್ದಿಯಾಗಿದ್ದ ಹುಲಿಯೂರು ದುರ್ಗ ಶಂಕರಣ್ಣ ತಾನೇ ನೆಟ್ಟು ಬೆಳೆಸಿದ್ದ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಹಿಂದಿನ ಅಸಲಿ ಸತ್ಯ ಇಲ್ಲಿದೆ.
Recommended Video

ಸಮುದಾಯವನ್ನೇ ಎದುರಾಕಿಕೊಂಡು ಆಯುಧ ಪೂಜೆ ದಿನ ಅನ್ಯ ಜಾತಿಯ ಹುಡುಗಿ ಕೈ ಹಿಡಿದು ಕ್ರಾಂತಿ ಮಾಡಿದ್ದ ಶಂಕರಣ್ಣ ಆರು ತಿಂಗಳಿಗೆ ಜೀವನದಲ್ಲಿ ಬೇಸತ್ತು ಯುಗಾದಿ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಮುಗ್ಧ ರೈತ ಶಂಕರಣ್ಣನ ಆತ್ಮಹತ್ಯೆಯ ನೈಜ ಕಾರಣ ನೋಡಿದರೆ ಎಂಥವರಿಗೂ ಬೇಸರವಾಗುತ್ತದೆ. ಈ ಬಗ್ಗೆ ಹುಲಿಯೂರು ದುರ್ಗ ಪೊಲೀಸರು ನೀಡಿದ ಮಾಹಿತಿ ವಿವರ ಇಲ್ಲಿದೆ.
ಆರು ತಿಂಗಳ ಹಿಂದೆ ವೈರಲ್ :
ಆರು ತಿಂಗಳ ಹಿಂದೆ ದೇವಸ್ಥಾನದ ಎದುರಲ್ಲಿ 47 ವರ್ಷ ವಯಸ್ಸಿನ ಶಂಕರಣ್ಣ 24 ವರ್ಷದ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದ ಪೋಟೋ ವೈರಲ್ ಆಗಿತ್ತು. ವಿಚ್ಚೇಧಿತ ಹಾಗೂ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗುವ ಶಂಕರಣ್ಣನ ನಿರ್ಧಾರಕ್ಕೆ ಅವರದ್ದೇ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ಉಲ್ಲೇಖಿಸಿ ಟ್ರೋಲ್ ಮಾಡಲಾಗಿತ್ತು. ಮದುವೆಯಾಗಲು ಹುಡುಗಿ ಸಿಗದ ಯುವಕರು ಶಂಕರಣ್ಣನ ನೋಡಿ ಸೂಸೈಡ್ ಮಾಡಿಕೊಳ್ಳಿ ಎಂದೆಲ್ಲಾ ಕಮೆಂಟ್ಸ್ ಹಾಕಿದ್ದರು.

ಶಂಕರಣ್ಣನ ಮದುವೆ ಆಗಲಿಕ್ಕೆ ಒಂದು ಕಾರಣ ಇತ್ತು. ಶಂಕರಣ್ಣನಿಗೆ ಅಪ್ಪ ಇಲ್ಲ. ವಯೋವೃದ್ಧ ಅಮ್ಮ ಇದ್ದಳು. ಇದ್ದ ಒಬ್ಬ ಅಣ್ಣನಿಗೆ ಐದು ವರ್ಷದ ಹಿಂದೆ ಹಾವು ಕಚ್ಚಿ ಸಾವನ್ನಪ್ಪಿದ್ದ. ಶಂಕರಣ್ಣನ ತಾಯಿ ರಂಗಮ್ಮನಿಗೆ ಆತನೇ ಅಡುಗೆ ಮಾಡಿ ಹಾಕುವ ಪರಿಸ್ಥಿತಿ ಎದುರಾಗಿತ್ತು. ಒಂದೆಡೆ ರೇಷ್ಮೆ ಕೃಷಿ, ಕಬ್ಬು ಬೆಳೆ, ನೆಮ್ಮದಿ ಜೀವನಕ್ಕೆ ಬೇಕಾದಷ್ಟು ಹಣವನ್ನು ಶಂಕರಣ್ಣ ದುಡಿಯುತ್ತಿದ್ದ. ತನ್ನ ತಾಯಿಯನ್ನು ನೋಡಿಕೊಳ್ಳುವ ಜತೆಗೆ ತನಗೂ ಒಬ್ಬ ಸಂಗಾತಿ ಬೇಕು ಎಂಬ ಆಸೆ ಚಿಗುರೊಡೆದಿತ್ತು.

ಶಂಕರಣ್ಣ ಮದುವೆ ಕನಸು, ಆತನ ಆಸ್ತಿಯ ಬಗ್ಗೆ ವಿವರ ಪಡೆದಿದ್ದ ಅದೇ ಊರಿನ ಮೇಘನಾ ಎಂಬ ಯುವತಿ ಮದುವೆ ಪ್ರಸ್ತಾಪ ಇಟ್ಟಿದ್ದಳು. ಮದುವೆಯಾಗಿ ಗಂಡನಿಂದ ದೂರ ಆಗಿದ್ದ ಮೇಘನಾ ಶಂಕರಣ್ಣನನ್ನು ಮದುವೆಯಾಗುವ ಒಲವು ವ್ಯಕ್ತಪಡಿಸಿದ್ದರು. ಶಂಕರಣ್ಣನಿಗೆ ತನಗೂ ಮದುವೆಯಾಗುವ ಹುಡುಗಿಗೂ ಇರುವ ವಯಸ್ಸಿನ ಅಂತರದ ಸತ್ಯ ಗೊತ್ತಾಗಿತ್ತು. ಆ ಕ್ಷಣದಲ್ಲಿ ಅವರಿಬ್ಬರಿಗೂ ಅದು ಮುಖ್ಯ ವಾಗಿರಲಿಲ್ಲ. ಮದುವೆಯಾಗದೇ ಇದ್ದ ಶಂಕರಣ್ಣನಿಗೆ ಮದುವೆಯಾಗುವ ಖುಷಿ. ಮೇಘನಾಗೆ ಹೊಸ ಬಾಳು ಸಿಕ್ಕ ಸಂತಸ. ಹೀಗಾಗಿ ಇಬ್ಬರು ದೇವಸ್ಥಾನದ ಎದುರು ಸಪ್ತಪದಿ ತುಳಿದಿದ್ದರು. ಈ ಜೋಡಿಯ ಪೋಟೋ ವೈರಲ್ ಅಗಿತ್ತು.
ಮದುವೆ ನಂತರ ಕಿರಿಕ್:
25 ವರ್ಷ ಅಂತರವಿದ್ದ ಹೆಂಡತಿಗೆ ಟಿಕ್ ಟಾಕ್ ಹುಚ್ಚು, ಸಾಮಾಜಿಕ ಜಾಲ ತಾಣದಲ್ಲಿ ಮೆರೆಯುವ ಹಂಬುತನ. ಇನ್ನು ಬೆಂಗಳೂರಿನಲ್ಲಿ ಐಶರಾಮಿ ಜೀವನ ನಡೆಸಬೇಕೆಂಬ ಆಸೆ. ಇದ್ಯಾವುದಕ್ಕೂ ಶಂಕರಣ್ಣ ಅಡ್ಡಿ ಪಡಿಸಲೇ ಇಲ್ಲ. ಹೀಗಿರುವಾಗಲೆ ಪತ್ನಿ ಮೇಘನಾ ಊರಿನಲ್ಲಿರುವ ಎರಡು ಎಕರೆ ಜಮೀನು ಮಾರಿಬಿಡಿ, ಬೆಂಗಳೂರಿಗೆ ಹೋಗಿ ಬಿಡೋಣ ಎಂದು ಪೀಡಿಸುತ್ತಿದ್ದಳು. ಈ ವಿಚಾರವಾಗಿ ಶಂಕರಣ್ಣ ಮತ್ತು ಮೇಘನಾ ಪದೇ ಪದೇ ಜಗಳ ಮಾಡುತ್ತಿದ್ದರು. ತನ್ನ ತಾಯಿಯನ್ನು ಬಿಟ್ಟು ದೂರ ಅಗುವ ಮನಸು ಶಂಕರಣ್ಣನಿಗೆ ಇರಲಿಲ್ಲ. ಈ ವಿಚಾರವಾಗಿ ಗಂಡ ಹೆಂಡತಿ ಪದೇ ಪದೇ ಜಗಳ ಮಾಡಿಕೊಂಡಿದ್ದರು.

ನಾಯಿ ವಿಚಾರದಲ್ಲಿ ಜಗಳ:
ಶಂಕರಣ್ಣನ ವಯೋವೃದ್ದ ತಾಯಿ ರಂಗಮ್ಮನನ್ನು ನೋಡಿದ್ರೆ ಮೇಘನಾಗೆ ಹಿಡಿಸುತ್ತಿರಲಿಲ್ಲ. ಚಿಕ್ಕಪುಟ್ಟ ವಿಚಾರದಲ್ಲಿ ಜಗಳ ಮಾಡುತ್ತಿದ್ದಳು. ಶಂಕರಣ್ಣ ಸೋಮವಾರ ಚೌಡನಕುಪ್ಪೆ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿದ್ದರು. ವಾಪಸು ರಾತ್ರಿ ಮನೆಗೆ ಬಂದಾಗ ಪತ್ನಿ ಮೇಘನಾ ತಾಯಿ ರಂಗಮ್ಮ ಜಗಳ ಮಾಡುತ್ತಿದ್ದರು. ವಯೋವೃದ್ಧ ತಾಯಿಯ ಜತೆ ಜಗಳ ಮಾಡುತ್ತಿದ್ದ ಹೆಂಡತಿ ನಡೆ ನೋಡಿ ಬೇಸತ್ತಿದ್ದ. ಹುಟ್ಟ ಪಂಚೆಯಲ್ಲೇ ರಾತ್ರಿ ಮನೆಯಿಂದ ತೆರಳಿದ ಶಂಕರಣ್ಣ ತೋಟದ ಬಳಿ ಹೋಗಿ ತಾನೇ ನೆಟ್ಟು ಬೆಳೆಸಿದ್ದ ಹಲಸಿನ ಮರಕ್ಕೆ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಹುಲಿಯೂರು ದುರ್ಗ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಚೇತನ್ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶಂಕರಣ್ಣ ಮೃತಪಟ್ಟಿರುವುದು ಖಚಿತವಾಗಿದೆ. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಆಸ್ತಿ ಮಾರಾಟ ಮಾಡಿ ಬೆಂಗಳೂರಿಗೆ ಹೋಗುವಂತೆ ಶಂಕರಣ್ಣನ ಪತ್ನಿ ಪೀಡಿಸುತ್ತಿದ್ದಳು. ಇದರಿಂದ ಶಂಕರಣ್ಣ ಮಾನಸಿಕವಾಗಿ ನೊಂದುಕೊಂಡಿದ್ದರು. ವಯೋ ವೃದ್ಧ ತಾಯಿಯನ್ನು ಬಿಟ್ಟು ಹೋಗಲಾರದ ಮನಸ್ಥಿತಿ. ಈ ಮದುವೆ ಬೇಡ ಎಂದು ಊರವರೆಲ್ಲರೂ ಹೇಳಿದ ಬುದ್ಧಿಮಾತು ಧಿಕ್ಕರಿಸಿ ಆಯುಧ ಪೂಜೆ ದಿನ ಮದುವೆಯಾಗಿದ್ದರು. ಆರು ತಿಂಗಳ ಜೀವನ ನಡೆಸುವ ವೇಳೆಗೆ ಜೀವನ ಸಾಕಾಗಿ ಯುಗಾದಿ ಮೊದಲೇ ಜೀವನ ಪಯಣ ನಿಲ್ಲಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications