ತುಮಕೂರು ಯುವಕನಿಗೆ ಕೊರೊನಾ ಶಂಕೆ: ಬಂತು ವೈದ್ಯಕೀಯ ವರದಿ
ತುಮಕೂರು, ಫೆಬ್ರವರಿ 06: ಚೀನಾದಿಂದ ಮರಳಿದ್ದ ಯುವಕನಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಕೊರೊನಾ ವೈರಸ್ ಎಂದು ಶಂಕಿಸಲಾಗಿತ್ತು. ಯುವಕನ ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆಂದು ಪುಣೆಗೆ ಕಳುಹಿಸಲಾಗಿತ್ತು.
ಇದೀಗ ವೈದ್ಯಕೀಯ ವರದಿ ಬಂದಿದ್ದು, ಚೀನಾದಿಂದ ಮರಳಿದ್ದ ತುಮಕೂರಿನ ಯುವಕನಿಗೆ ಕೊರೊನಾ ವೈರಸ್ ಇಲ್ಲವೆಂದು ವರದಿ ಹೇಳಿದೆ. ಆ ಮೂಲಕ ಜಿಲ್ಲೆಯ ಜನರಿಗೆ ವಿಶೇಷವಾಗಿ ವೈದ್ಯಾಧಿಕಾರಿಗಳಿಗೆ ನಿರಾಳ ಭಾವವನ್ನು ವರದಿ ಮೂಡಿಸಿದೆ.
ನಗರದ ಹನುಮಂತಪುರದ ನಿವಾಸಿ ಯುವಕನು ಇತ್ತೀಚೆಗಷ್ಟೆ ಚೀನಾದಿಂದ ವಾಪಸ್ಸಾಗಿದ್ದ. ಆತನಿಗೆ ನೆಗಡಿ, ಜ್ವರ, ನಿಶ್ಯಕ್ತಿ ಕಾಣಿಸಿಕೊಂಡಿತ್ತು. ಆತನಿಗೆ ಕೊರೊನಾ ವೈರಸ್ ತಗುಲಿರಬಹುದೆಂಬ ಶಂಕೆಯಿಂದ ಆತನ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಿ ಪ್ರತಿದಿನ ಜಿಲ್ಲಾ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು.

ಆದರೆ ಪುಣೆಯಿಂದ ಬಂದಿರುವ ವರದಿಯಂತೆ ಯುವಕನಿಗೆ ಕೊರೊನಾ ಇಲ್ಲದೇ ಇರುವುದು ಪತ್ತೆಯಾಗಿದ್ದು. ಯುವಕನಿಗೆ ಸಾಮಾನ್ಯ ಜ್ವರ ಮಾತ್ರವೇ ಇದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಧೃಡಪಡಿಸಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಉಂಟಾಗಿದ್ದ ಆತಂಕ ನಿವಾರಣೆ ಆಗಿದೆ.
ಕರೋನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ 5 ಕೊಠಡಿಗಳ ಹಾಸಿಗೆಗಳು ಹಾಗೂ ಒಂದು ವೆಂಟಿಲೇಟರ್ ಅನ್ನು ಮೀಸಲಿಟ್ಟು ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಜನ ಸಾಮಾನ್ಯರಿಗೆ ಮುಂಜಾಗೃತ ಕ್ರಮವಾಗಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಐಇಸಿ ಮಾಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಪಕ್ಕದ ಕೇರಳದಲ್ಲಿ ಕೊರೊನಾ ಪತ್ತೆ ಆಗಿರುವ ಕಾರಣ, ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಚೀನಾ ಸೇರಿದಂತೆ ಕೊರೊನಾ ಪೀಡಿತ ದೇಶಗಳಿಂದ ಬರುತ್ತಿರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.












Click it and Unblock the Notifications