ತುಮಕೂರು-ಚಿತ್ರದುರ್ಗ & ಬಾಗಲಕೋಟೆ- ಕುಡಚಿ ರೈಲು ಮಾರ್ಗಗಳ ಬಗ್ಗೆ ಬಿಗ್ ಅಪ್ಡೇಟ್..
ತುಮಕೂರು, ಅಕ್ಟೋಬರ್ 5: ರಾಜ್ಯದಲ್ಲಿ ರೈಲ್ವೆ ಜಾಲ ವಿಸ್ತರಣೆ ಆಗುತ್ತಲೇ ಇದೆ. ಇನ್ನು ಇದೀಗ ತುಮಕೂರು-ಚಿತ್ರದುರ್ಗ ಮತ್ತು ಬಾಗಲಕೋಟೆ-ಕುಡಚಿ ನಡುವಿನ ರೈಲು ಮಾರ್ಗಗಳ ಕಾಮಗಾರಿ ಯಾವಾಗ ಮುಗಿಯಲಿದೆ ಎನ್ನುವ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರೈಲ್ವೆ ಕಾಮಗಾರಿಯಲ್ಲಿ ಅಭಿವೃದ್ಧಿ ಕ್ರಾಂತಿ ಆಗುತ್ತಿದೆ. ಈ ನಡುವೆಯೇ ಇದೀಗ ತುಮಕೂರು- ಚಿತ್ರದುರ್ಗ ಹಾಗೂ ಬಾಗಲಕೋಟೆ- ಕುಡಚಿ ನಡುವಿನ ರೈಲು ಮಾರ್ಗಗಳ ಕಾಮಗಾರಿ ಬಗ್ಗೆ ಬಿಗ್ ಅಪ್ಡೇಟ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿದ್ದಾರೆ. ಈ ಮಾರ್ಗಗಳ ನಡುವಿನ ರೈಲ್ವೆ ಕಾಮಗಾರಿ ವೇಗ ಪಡೆದುಕೊಂಡಿದ್ದು, 2026ರ ವೇಳೆಗೆ ಬಹುತೇಕ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ತುಮಕೂರು-ಚಿತ್ರದುರ್ಗ ನಡುವಿನ ರೈಲು ಮಾರ್ಗದ ಕಾಮಗಾರಿ ಕೇವಲ 28 ಕಿ.ಮೀ. ಅಷ್ಟೇ ಬಾಕಿಯಿದೆ. 2026ರ ಫೆಬ್ರವರಿ ಒಳಗೆ ಇದರ ಎಲ್ಲಾ ಕಾಮಗಾರಿ ಮುಕ್ತಾಯ ಆಗವ ಸಾಧ್ಯತೆಯಿದೆ. ಇದರಿಂದ ಧಾರವಾಡ-ಬೆಂಗಳೂರು ನಡುವಿನ ಪ್ರಯಾಣದ ಸಮಯ 1 ಗಂಟೆ ಇಳಿಕೆ ಆದಂತಾಗಲಿದೆ ಎಂದು ಹೇಳಿದರು.
ಇನ್ನು ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಡುವಿನ ಲೋಕಾಪುರ-ದಾದನಟ್ಟಿ ಮಧ್ಯದ 6.6 ಕಿ.ಮೀ. ರೈಲು ಮಾರ್ಗದ ಕಾಮಗಾರಿ 2026ರ ಮಾರ್ಚ್ ಒಳಗೆ ಮುಕ್ತಾಯ ಆಗಲಿದೆ ಎಂದು ಹೇಳಿದರು. ಇನ್ನು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಹೊಂದಿರುವ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಈ ಕುರಿತು ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಇದಕ್ಕೆ 400 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಪ್ರಸ್ತಾವನೆಯನ್ನ ರೈಲ್ವೆ ಬೋರ್ಡ್‌ಗೆ ಸಲ್ಲಿಕೆ ಮಾಡಲಾಗುವುದು. ಇದಕ್ಕೆ ಒಪ್ಪಿಗೆ ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ, ಪರಿಸರ ಹಾಗೂ ವನ್ಯಜೀವಿ ಮಂಡಳಿಯಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಬೇಕಾದ ಅಗತ್ಯ ಆಗಿರುವ ಸಲಹೆಗಳನ್ನ ಪಡೆಯಲಾಗಿದೆ. 17,140 ಕೋಟಿ ರೂಪಾಯಿ ವೆಚ್ಚದ ಹೊಸ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಇದಕ್ಕೆ ಕೇವಲ ಸಂಸತ್ತಿನ ಒಪ್ಪಿಗೆ ಮಾತ್ರ ಸಿಗಬೇಕಿದೆ. ಒಪ್ಪಿಗೆ ಸಿಕ್ಕ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆ ಜಾರಿಯಾಗುತ್ತಿದ್ದಂತೆ ಅಂಕೋಲಾದ ಬೇಲೆಕೇರಿ ಸೇರಿ 2 ಕಡೆ ಬಂದರು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ರೈಲ್ವೆ, ರಸ್ತೆ ಹಾಗೂ ವಾಯು ಮಾರ್ಗಕ್ಕಿಂತ ಬಂದರಿನಿಂದ ವ್ಯಾಪಾರ, ವಹಿವಾಟು ಹೆಚ್ಚಾದಂತಾಗಲಿದೆ. ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಬೆಳವಣಿಗೆಗೆ ತುಂಬಾ ಅನುಕೂಲ ಆದಂತಾಗಲಿದೆ ಎಂದು ಹೇಳಿದರು. ಹೀಗೆ ರಾಜ್ಯದಲ್ಲಿ ರೈಲ್ವೆ ಜಾಲ ವಿಸ್ತರಣೆ ಕಾಮಗಾರಿಯಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಇನ್ನೂ ಈ ಮಾರ್ಗದಲ್ಲಿ ಏನಾದರೂ ರೈಲು ಸಂಚಾರ ಆರಂಭ ಆದ್ರೆ, ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಿದಂತಾಗಲಿದ್ದು, ಪ್ರಯಾಣಿಕರಿಗೂ ತುಂಬಾ ಅನುಕೂಲ ಆಗಲಿದೆ.












Click it and Unblock the Notifications