ಶಿರಾದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ; ರಾಜೇಶ್ ಗೌಡ ನಾಮಪತ್ರ
ತುಮಕೂರು, ಅಕ್ಟೋಬರ್ 16: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಶುಕ್ರವಾರ ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಿದರು. ನವೆಂಬರ್ 3ರಂದು ಚುನಾವಣೆ ನಡೆಯಲಿದೆ.
ಶುಕ್ರವಾರ ರೋಡ್ ಶೋ ಮೂಲಕ ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ನಾಮಪತ್ರವನ್ನು ಸಲ್ಲಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ. ಅಶ್ವಥ್ ನಾರಾಯಣ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೂ ಮೊದಲು ಶಿರಾದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಸಾವಿರಾರು ಸಂಖ್ಯೆಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಬುಧವಾರ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನಗರಾಧ್ಯಕ್ಷರಾದ ವಿಜಯ ರಾಜ್ ಮುಂತಾದವರು ಅಂದು ಹಾಜರಿದ್ದರು. ಇಂದು ಮತ್ತೆ ನಾಮಪತ್ರ ಸಲ್ಲಿಕೆ ಮಾಡಿ, ಶಕ್ತಿ ಪ್ರದರ್ಶನ ಮಾಡಲಾಗಿದೆ.
ಶಿರಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿ ತಂತ್ರ ರೂಪಿಸುತ್ತಿದೆ. ಅದಕ್ಕಾಗಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ರಾಜೇಶ್ ಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.

ಶಿರಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್‌ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳು. ಇಬ್ಬರೂ ಸಹ ನಾಮಪತ್ರಗಳನ್ನು ಈಗಾಗಲೇ ಸಲ್ಲಿಸಿದ್ದಾರೆ. ಗುರುವಾರ ಟಿ. ಬಿ. ಜಯಚಂದ್ರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಬಂದು ನಾಮಪತ್ರ ಸಲ್ಲಿಸಿದ್ದರು.
2018ರ ಚುನಾವಣೆಯಲ್ಲಿ ಶಿರಾದಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ಗೆಲವು ಸಾಧಿಸಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಜೆಡಿಎಸ್‌ನಿಂದ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅಭ್ಯರ್ಥಿ.
2008, 2013 ಮತ್ತು 2018ರ ಚುನಾವಣೆಯಲ್ಲಿ ಶಿರಾದಲ್ಲಿ ಬಿಜೆಪಿ ಗೆದ್ದಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ನಾಯಕರು ಪಣ ತೊಟ್ಟಿದ್ದಾರೆ.












Click it and Unblock the Notifications