ಶಿರಾ ಉಪ ಚುನಾವಣೆ; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ
ತುಮಕೂರು, ಅಕ್ಟೋಬರ್ 14 : ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ನಾಮಪತ್ರವನ್ನು ಸಲ್ಲಿಸಿದರು. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, 10ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನಗರಾಧ್ಯಕ್ಷರಾದ ವಿಜಯ ರಾಜ್ ಉಪಸ್ಥಿತರಿದ್ದರು. ಮಂಗಳವಾರ ರಾಜೇಶ್ ಗೌಡ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿತ್ತು.
ಕಳೆದ ವಾರ ಡಾ. ರಾಜೇಶ್ ಗೌಡ ಅವರು ಬಿಜೆಪಿ ಸೇರಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಖಚಿತವಾದ ಬಳಿಕವೇ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಜೇಶ್ ಗೌಡ ತಂದೆ ಮೂಡಲಗಿರಿಯಲ್ಲ ಕಾಂಗ್ರೆಸ್ ಸದಸ್ಯರಾಗಿದ್ದರು.

ಶಿರಾ ಉಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ತಂತ್ರ ರೂಪಿಸಿರುವ ಬಿಜೆಪಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ರಾಜೇಶ್ ಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.
ಮೂರು ಪ್ರಮುಖ ಪಕ್ಷಗಳು ಶಿರಾ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿವೆ. ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್‌ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ. ಇಬ್ಬರೂ ಸಹ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಶಿರಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ಗೆಲವು ಸಾಧಿಸಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ಪಕ್ಷ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿದೆ.
ಶಿರಾ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ. 2008, 2013 ಮತ್ತು 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಉಳಿದ ಪಕ್ಷಗಳಿಗಿಂತ ಮೊದಲು ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿತ್ತು. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಜಯಗಳಿಸಲಿದೆಯೇ? ಕಾದು ನೋಡಬೇಕಿದೆ.
2008, 2013ರಲ್ಲಿ ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ ಕ್ಷೇತ್ರದಲ್ಲಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ಉಪ ಚುನಾವಣೆಯಲ್ಲಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ.












Click it and Unblock the Notifications