ತುಮಕೂರಿನಲ್ಲಿ BJP ವಿಜಯ ಸಂಕಲ್ಪ ಯಾತ್ರೆ: JP Nadda ಭರ್ಜರಿ ರೋಡ್ ಶೋ
ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ತುಮಕೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ.
ತುಮಕೂರು, ಮಾರ್ಚ್ 18: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳು ಭರ್ಜರಿ ಪ್ರಚಾರ ಆಂಭಿಸಿವೆ. ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಬಹುಮತಕ್ಕಾಗಿ ಶತ ಪ್ರಯತ್ನ ಪಡುತ್ತಿದೆ.
ವಿಧಾನಸಭಾ ಚುನಾವಣೆ ಗೆಲುವಿಗಾಗಿ ಬಿಜೆಪಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭವಾದ ವಿಜಯ ಸಂಕಲ್ಪ ಯಾತ್ರೆ ಶನಿವಾರ ತುಮಕೂರಿಗೆ ಆಗಮಿಸಿದೆ. ಈಗಾಗಲೇ ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿದ್ದು, ಜನರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಶನಿವಾರ ತುಮಕೂರು ನಗರದಲ್ಲಿ ಬಿಜೆಪಿ ಯಾತ್ರೆ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭಾಗಿಯಾಗಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ತುಮಕೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗಿದ್ದು, ರೋಡ್ ಶೋ ಉದ್ದಕ್ಕೂ ಪಕ್ಷದ ಬಾವುಟ ಹಿಡಿದು ಕಾರ್ಯಕರ್ತರು ಘೋಷಣೆಗಳನ್ನು ಹಾಕುತ್ತ ಸಾಗಿದ್ದಾರೆ.
ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ನಡ್ಡಾ ಚಾಲನೆ ನೀಡಿದ್ದು, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೇರಿದಂತೆ ಪಕ್ಷದ ನಾಯಕರು ಭಾಗಿಯಾಗಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗಿತ್ತು. ಮಾರ್ಚ್ 1ರಂದು ಜೆ.ಪಿ ನಡ್ಡಾ ಈ ಯಾತ್ರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದರು.
ರಾಜ್ಯದ ನಾಲ್ಕು ದಿಕ್ಕುಗಳಿಂದ ಒಟ್ಟು 25 ದಿನ 8 ಸಾವಿರ ಕಿ.ಮೀ ಕ್ರಮಿಸುವ ಉದ್ದೇಶ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯದ್ದಾಗಿದ್ದು, ಈ ಯಾತ್ರೆಗೆಂದೇ ನಾಲ್ಕು ವಿಶೇಷ ಬಸ್ ರೀತಿಯ ವಾಹನ ಸಿದ್ಧ ಪಡಿಸಲಾಗಿತ್ತು. ಜೊತೆಗೆ ಅದರಲ್ಲೇ ನಿಂತು ಭಾಷಣ ಮಾಡಲೂ ವ್ಯವಸ್ಥೆ ಮಾಡಲಾಗಿತ್ತು. ಯಾತ್ರೆ ವೇಳೆ ಸುಮಾರು 80 ರ್ಯಾಲಿ, 75ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಗುರಿ ಇದ್ದು, 150 ರೋಡ್ ಶೋಗಳನ್ನು ನಡೆಸಲು ಬಿಜೆಪಿ ತಯಾರಿ ನಡೆಸಿದ್ದು, ಸುಮಾರು 18 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

ರಾಜ್ಯಾದ್ಯಂತ 25 ದಿನ ಸುತ್ತಾಟ ನಡೆಸಲಿರುವ ಈ ಯಾತ್ರೆ ಮಾರ್ಚ್25ರಂದು ದಾವಣಗೆರೆಯಲ್ಲಿ ಸಮಾಪ್ತಿಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳ ಕಾರ್ಯಕ್ರಮಕ್ಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ದಾವಣಗೆರೆಯ ಜಿ.ಎಂ.ಐ.ಟಿ. ಕಾಲೇಜಿನ ಪಕ್ಕದಲ್ಲಿ ಸುಮಾರು 400 ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ.
ಮಾರ್ಚ್25ರಂದು ದಾವಣಗೆರೆಯಲ್ಲಿ ಬಿಜೆಪಿ 'ಮಹಾ ಸಂಗಮ' ಸಮಾವೇಶ ನಡೆಯಲಿದ್ದು, ಈಗಾಗಲೇ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ಬಿಜೆಪಿ ಮುಖಂಡರು ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.












Click it and Unblock the Notifications