Karnataka Budget 2024: ತುಮಕೂರಿನವರೆಗೂ ನಮ್ಮ ಮೆಟ್ರೋ ವಿಸ್ತರಣೆ?
ತುಮಕೂರು, ಫೆಬ್ರವರಿ, 13: ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಜನರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗೆಯೇ ತುಕೂರಿನ ಜನ ಮೆಟ್ರೋ ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಮಂಡಿಸಬೇಕೆನ್ನುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು ಈಗಾಗಲೇ ವಿಸ್ತರಣೆಯಾಗುತ್ತಲೇ ಇದೆ. ಇನ್ನೂ ಕೆಲವೇ ವರ್ಷಗಳಲ್ಲಿ ತುಮಕೂರಿನವರೆಗೂ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಬಾರಿಯ ರಾಜ್ಯದ ಬಜೆಟ್ ಬಗ್ಗೆ ಜಿಲ್ಲೆಯ ಜನರು ತುಂಬಾ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅನಗರದ ಭಿವೃದ್ಧಿಗೆ 500 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ಜನಪ್ರತಿನಿಧಿಗಳ ಆಗ್ರಹವಾಗಿದೆ.

ತುಮಕೂರು ವೇಗವಾಗಿ ಬೆಳೆಯುತ್ತಿದ್ದು, ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಮೆಟ್ರೋ ರೈಲು ಯೋಜನೆ ವಿಸ್ತರಣೆ ಮಾಡುವಂತೆ ಒತ್ತಡ ಹಾಕಲಾಗುತ್ತದೆ. ವಿಧಾನಸಭೆ ಚುನಾವಣೆ ಪ್ರಾಣಳಿಕೆಯಲ್ಲೂ ತುಮಕೂರಿಗೆ ಮೆಟ್ರೋ ವಿಸ್ತರಿಸುವ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಈಗಾಗಲೇ ಯೋಜನಾ ವರದಿ ಸಿದ್ಧಪಡಿಸಲು ಚಾಲನೆ ನೀಡಲಾಗಿದೆ. ಅನುದಾನ ಒದಗಿಸದೆ ಯೋಜನೆಗೆ ಚಾಲನೆ ಸಿಗುವುದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಸ್ವಲ್ಪ ಮಟ್ಟಿಗಾದರೂ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗಿದ್ದರೂ ಇಡೀ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ಯೋಜನೆಯಲ್ಲಿ ಕೇವಲ 6 ವಾರ್ಡ್‌ಗಳಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ನಡೆದಿವೆ. ಉಳಿದ ಬಡಾವಣೆಗಳು ಇನ್ನೂ ಹಳ್ಳಿಯ ಸ್ಥಿತಿಯಲ್ಲೇ ಇವೆ. ಬೆಂಗಳೂರಿಗೆ ತುಮಕೂರು ಪರ್ಯಾಯ ನಗರವಾಗಿ ಬೆಳವಣಿಗೆ ಕಾಣುತ್ತಿದ್ದು, ನಗರದ ವ್ಯಾಪ್ತಿ ವಿಸ್ತರಣೆಗೆ ಚಾಲನೆ ನೀಡಲಾಗಿದೆ. ಇದು ಆದರೆ ಸುತ್ತಮುತ್ತಲಿನ ಮತ್ತಷ್ಟು ಹಳ್ಳಿಗಳು ನಗರಕ್ಕೆ ಸೇರಲಿವೆ. ಅಂತಹ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ನೀಡಲು ವಿಶೇಷ ಅನುದಾನ ಬೇಕಾಗುತ್ತದೆ ಎನ್ನುವುದು ತುಮಕೂರಿನ ಜನರದ್ದಾಗಿದೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ.
ಇನ್ನು ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡಿ, ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಲು ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ವಿಶೇಷ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಅವರು, ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ನಗರಕ್ಕೆ ವಿಶೇಷ ಅನುದಾನ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹಾಗೆಯೇ ವಿವಿ ಆರಂಭವಾಗಿ (2004ರಲ್ಲಿ) ಎರಡು ದಶಕಗಳಿಗೆ ಕಾಲಿಟ್ಟಿದ್ದು, ಈವರೆಗೂ ಸ್ವಂತ ಕ್ಯಾಂಪಸ್ ಹೊಂದಲು ಸಾಧ್ಯ ಆಗಿಲ್ಲ. ನಗರದ ಹೊರ ವಲಯದ ಬಿದರಕಟ್ಟೆ ಬಳಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅನುದಾನ ಇಲ್ಲದೆ ಕೆಲವು ಕಟ್ಟಡಗಳ ನಿರ್ಮಾಣಕ್ಕೆ ಸೀಮಿತಗೊಂಡಿವೆ. ಪೂರ್ಣ ಪ್ರಮಾಣದಲ್ಲಿ ಕ್ಯಾಂಪಸ್ ಅಭಿವೃದ್ಧಿ ಮಾಡಲು 200 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿ ತುಂಬಾ ವರ್ಷಗಳಾಗಿದ್ದು, ಇಲ್ಲಿ ಕಚೇರಿಗಳಿಗೂ ಸ್ಥಳವಕಾಶ ಒದಗಿಸಲು ಸಾಧ್ಯ ಆಗಿಲ್ಲ. ಇನ್ನೂ ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲವನ್ನೂ ಒಂದೆಡೆಗೆ ತರುವ ಅಗತ್ಯವಿದೆ. ಅದಕ್ಕಾಗಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ.
ಇನ್ನು ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯುತ್ತಿದ್ದು, ತೆಂಗು ಪಾರ್ಕ್ ನಿರ್ಮಾಣದ ಬೇಡಿಕೆಯನ್ನು ಈಡೇರಿಸಬೇಕು. ಪ್ರತಿ ಬಾರಿಯೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಷ್ಟೇ ಸೀಮಿತಗೊಂಡಿದ್ದು, ತೆಂಗು ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತೆಂಗು ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವಾಗಬೇಕು. ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications