ಸಂಪುಟ ವಿಸ್ತರಣೆಯ ಗುಮ್ಮದಲ್ಲಿರುವ ಬಿಎಸ್ವೈಗೆ ಸಚಿವ ತೋರಿದ ಉದಾರತೆ
ತುಮಕೂರು, ಜ 26: ಧನುರ್ಮಾಸ ಮುಗಿಯಿತು, ಸಂಕ್ರಾಂತಿಯ ಎಳ್ಳುಬೆಲ್ಲ ಬೀರಿದ್ದಾಯಿತು, ವಿದೇಶ ಪ್ರವಾಸದಿಂದ ಬಂದಾಯಿತು, ಆದರೂ, ಸಚಿವ ಸಂಪುಟ ವಿಸ್ತರಣೆಯ ಗುಮ್ಮ, ಮುಖ್ಯಮಂತ್ರಿಗಳನ್ನು ಇನ್ನೂ ಕಾಡುತ್ತಲೇ ಇದೆ.
ಈ ನಡುವೆ, ಹಾಲೀ, ಪ್ರಭಾವೀ ಸಚಿವರೊಬ್ಬರು ನೀಡಿರುವ ಹೇಳಿಕೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತುಸು ನೆಮ್ಮದಿಯನ್ನು ತಂದುಕೊಡಬಹುದು.
"ಪಕ್ಷ ಬಯಸಿದ್ದಲ್ಲಿ, ಸಚಿವ ಸ್ಥಾನ ತ್ಯಾಗ ಮಾಡಲು ನಾನು ಸಿದ್ದ" ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. "ಸಂಪುಟ ವಿಸ್ತರಣೆಯ ವಿಚಾರದಲ್ಲಿ, ಪಕ್ಷ ಯಾವ ನಿರ್ದೇಶನ ಕೊಟ್ಟರೂ, ನಾನು ಅದನ್ನು ಪಾಲಿಸುತ್ತೇನೆ" ಎಂದು ಮಾಧುಸ್ವಾಮಿ ಹೇಳಿದ್ದಾರೆ.

"ರಾಜ್ಯಕ್ಕೆ ಒಂದು ಸುಭದ್ರ ಸರಕಾರವನ್ನು ನೀಡಿ, ಉತ್ತಮ ಆಡಳಿತ ನೀಡುವುದು ನಮ್ಮ ಪಕ್ಷದ ಗುರಿ. ಇದಕ್ಕಾಗಿ, ನನ್ನಿಂದ ಏನಾದರೂ ತ್ಯಾಗ ಆಗಬೇಕಿದ್ದರೆ. ಅದಕ್ಕೆ ನಾನು ಯಾವುದೇ ಮುಲಾಜಿಲ್ಲದೆ ಒಪ್ಪಿಕೊಳ್ಳಲು ಸಿದ್ದನಿದ್ದೇನೆ" ಎಂದು ಮಾಧುಸ್ವಾಮಿ ಹೇಳಿದ್ದಾರೆ.
"ಸಚಿವ ಸ್ಥಾನದ ಜೊತೆಗೆ ಶಾಸಕನಾಗಿಯೂ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಸಚಿವ ಸ್ಥಾನದಿಂದ ಕೈಬಿಟ್ಟರೆ, ನನಗೆ ಬೇಸರದ ಬದಲು, ಸಂತೋಷವಾಗಲಿದೆ" ಎನ್ನುವ ಹೇಳಿಕೆಯನ್ನು ಮಾಧುಸ್ವಾಮಿ ಹೇಳಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿ ತುಮಕೂರಿಗೆ ಆಗಮಿಸಿದ್ದಾಗ, ಆ ಎಲ್ಲಾ ಕಾರ್ಯಕ್ರಮದ ಉಸ್ತುವಾರಿಯನ್ನು ವಿ.ಸೋಮಣ್ಣ ಅವರಿಗೆ ನೀಡಲಾಗಿತ್ತು. ಬಿಎಸ್ವೈ ಅವರ ಪರಮಾಪ್ತರಾಗಿರುವ ಮಾಧುಸ್ವಾಮಿ, ಎಲ್ಲಾ ವಿಚಾರದಲ್ಲೂ ಅಂತರ ಕಾಯ್ದುಕೊಂಡಿದ್ದರು.












Click it and Unblock the Notifications