ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ರೈತರ ಬದುಕಿಗೆ ಮರಣ ಶಾಸನ: ಮೈತ್ರಿ ಪಕ್ಷಗಳ ಹೋರಾಟ
ತುಮಕೂರು, ಡಿಸೆಂಬರ್ 05: ತುಮಕೂರು ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಆಹಾಕಾರ ಸೃಷ್ಠಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ, ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಡಿಸೆಂಬರ್ 7-8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಬಿಜೆಪಿ, ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಬಗ್ಗೆ ಹಠಮಾರಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ಅಲ್ಲದೇ ಡಿಸೆಂಬರ್ 7-8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸುವುದಾಗಿ ತಿಳಿಸಿದರು.

ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಎಕ್ಸ್‌ಪ್ರೆಸ್ ಕೆನಾಲ್ ವಿಚಾರದಲ್ಲಿ ಉಂಟಾಗಿರುವ ಹೇಮಾವತಿ ನೀರಿನ ಗೊಂದಲವನ್ನು ಸರ್ಕಾರ ನಿವಾರಣೆ ಮಾಡಬೇಕು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೆವು ಎಂದರು.
ಹಲವು ಮುಖಂಡರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಬಂದಿದೆ. ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಈ ನೀರನ್ನು ಕಸಿಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹೋರಾಟ ನಿಲ್ಲುವುದಿಲ್ಲ. ಹೋರಾಟದಲ್ಲಿ ಪ್ರಾಣಹಾನಿ, ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದರು.

ಯೋಜನೆಯಲ್ಲಿ ಲಭ್ಯವಿರುವ ಪ್ರಮಾಣದ ನೀರು ಕುಣಿಗಲ್‌ಗೆ ಹರಿಯುತ್ತಿದೆ. ಆದರೆ ದೊಡ್ಡ ಪೈಪ್‌ಗಳನ್ನು ಅಳವಡಿಸಿ ಇಲ್ಲಿಂದ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಇರುವ ಡಿ.ಕೆ.ಶಿವಕುಮಾರ್ ಅವರು ಹೇಮಾವತಿ ಡ್ಯಾಂನಿಂದಲೇ ನೇರವಾಗಿ ಮಾಗಡಿಗೆ ನೀರು ತೆಗೆದುಕೊಂಡುಹೋಗಲಿ, ಜಿಲ್ಲೆಯ ಪಾಲಿನ ನೀರು ಕೊಡುವುದಿಲ್ಲ. ನೀರನ್ನು ತೆಗೆದುಕೊಂಡೇ ಹೋಗುತ್ತೇವೆ ಎಂದು ತೊಡೆ ತಟ್ಟಿದರೆ, ಇಲ್ಲಿನ ರೈತರೂ ತೊಡೆ ತಟ್ಟಿ ನಿಲ್ಲುತ್ತಾರೆ, ಆಮೇಲೆ ನಿಮ್ಮ ಪರಿಸ್ಥಿತಿ ತೊಡೆ ಮುರಿದುಕೊಂಡ ದುರ್ಯೋಧನನಂತಾಗುತ್ತದೆ ಎಂದು ಸುರೇಶ್ ಗೌಡ ಹೇಳಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಜಿಲ್ಲೆಯ ಕುಡಿಯುವ ನೀರಿಗೆ ದೊಡ್ಡ ಮಟ್ಟದ ತೊಂದರೆಯಾಗುತ್ತದೆ. ನೀರು ತೆಗೆದುಕೊಂಡು ಹೋಗಲು ಭಾರಿ ಗಾತ್ರದ ಪೈಪ್‌ಗಳನ್ನು ಬಳಸಿದರೆ ನಮಗೆ ಹನಿ ನೀರೂ ಉಳಿಯುವುದಿಲ್ಲ. ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ, ಈ ಬಗ್ಗೆ ಅಧಿವೇಶನದಲ್ಲೂ ಹೋರಾಟ ಮಾಡುವುದಾಗಿ ಹೇಳಿದರು.
ಹೇಮಾವತಿ ಜಲಾಶಯದಿಂದ ತುಮಕೂರು ಬ್ರಾಂಚ್ ಕೆನಾಲ್‌ಗೆ 16-17 ಟಿಎಂಸಿ ನೀರು ಹರಿಯುತ್ತದೆ. ಇದರಲ್ಲಿ ಕುಣಿಗಲ್ ಪಾಲಿನ 3 ಟಿಎಂಸಿ ನೀರು ತೆಗೆದುಕೊಂಡು ಹೋಗಲು ಯಾರ ಅಭ್ಯಂತರವಿಲ್ಲ. ಆದರೆ ಪೈಪ್‌ಲೈನ್ ಮೂಲಕ ನೀರು ಹರಿಸುವುದಕ್ಕೆ ವಿರೋಧವಿದೆ. ಈ ತಿಂಗಳ 7 ಮತ್ತು 8ರಂದು ಗುಬ್ಬಿ ತಾಲೂಕು ಸಾಗರನಹಳ್ಳಿ ಗೇಟ್ ಬಳಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡು ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ವಿವಿಧ ಮಠಾಧೀಶರು, ರೈತರು, ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಗಳ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಶಾಸಕ ಜ್ಯೋತಿ ಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಿಲ್ಲೆಯ ಜನರಿಗೆ, ರೈತರಿಗೆ ಮರಣ ಶಾಸನವಾಗಲಿದೆ. ನಮ್ಮ ನೀರಿನ ಹಕ್ಕನ್ನು ಕಸಿಯುವ ಈ ಯೋಜನೆಗೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮುಂದಾಳತ್ವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ರೈತರೊಂದಿಗೆ ಇದೇ 7ರಂದು ಬೆಳಿಗ್ಗೆ 10.30ಕ್ಕೆ ಗುಬ್ಬಿ ತಾಲ್ಲೂಕು ಸಾಗರನಹಳ್ಳಿ ಬಳಿಯ ಹೇಮಾವತಿ ನಾಲೆ ಗೇಟ್ ಬಳಿಯಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
7ರಂದು ಮಧ್ಯಾಹ್ನ ಗುಬ್ಬಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಪಾದಯಾತ್ರೆ ಮುಂದುವರೆಸಿ, ಕಳ್ಳಿಪಾಳ್ಯದ ಗೇಟ್ ಬಳಿಯ ಓಂ ಪ್ಯಾಲೇಸ್ ಭವನದಲ್ಲಿ ಪಾದಯಾತ್ರಿಗಳು ರಾತ್ರಿ ತಂಗಿ ಮಾರನೇ ದಿನ ಯಾತ್ರೆ ಮುಂದುವರೆಸುತ್ತೇವೆ. 8ರಂದು ಸಂಜೆ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ತಲುಪಿ ಸೋಮವಾರದಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರವಿಶಂಕರ್ ಹೆಬ್ಬಾಕ ಹೇಳಿದರು.
ಈ ವೇಳೆ ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್ ಕುಮಾರ್, ಸಾಗರನಹಳ್ಳಿ ವಿಜಯ ಕುಮಾರ್, ಗಂಗರಾಜು, ಜೆಡಿಎಸ್ ಮುಖಂಡರಾದ ಗುಬ್ಬಿ ನಾಗರಾಜು, ಯೋಗಾನಂದ್, ವಿಜಯ್ ಕುಮಾರ್, ಮುಖಂಡರಾದ ಚಂದ್ರಶೇಖರ ಬಾಬು, ಟಿ.ಆರ್.ಸದಾಶಿವಯ್ಯ, ಪಂಚಾಕ್ಷರಯ್ಯ, ಜೆ.ಜಗದೀಶ್, ನಿಟ್ಟೂರು ಪ್ರಕಾಶ್ ಮೊದಲಾದವರು ಹಾಜರಿದ್ದರು.












Click it and Unblock the Notifications