ಶಿರಾ ಉಪ ಚುನಾವಣೆ; ಗೆದ್ದು ಇತಿಹಾಸ ಬರೆದ ಬಿಜೆಪಿ
ತುಮಕೂರು, ನವೆಂಬರ್ 10: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಜಯಭೇರಿ ಬಾರಿಸಿದ್ದಾರೆ. ಇದೇ ಮೊದಲ ಬಾರಿಗೆ ಶಿರಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಾಣ ಮಾಡಿದೆ.
ಶಿರಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮಂಗಳವಾರ ತುಮಕೂರು ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಬಿಜೆಪಿಯ ಡಾ. ರಾಜೇಶ್ ಗೌಡ ಅವರು 74,522 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ ಪ್ರಬಲ ಪೈಪೋಟಿ ನೀಡಿದರು.

ಉಪ ಚುನಾವಣೆ ಮತ ಎಣಿಕೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಿತು. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಉಪ ಚುನಾವಣೆ ಸೋಲುವ ಮೂಲಕ ಜೆಡಿಎಸ್ ಕ್ಷೇತ್ರವನ್ನು ಕಳೆದುಕೊಂಡಿದೆ.
ಶಿರಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯ ಅಭ್ಯರ್ಥಿ ಡಾ. ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ 61,573 ಮತ, ಜೆಡಿಎಸ್‌ನ ಅಮ್ಮಾಜಮ್ಮಗೆ 35,982 ಮತಗಳನ್ನು ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಡಾ. ರಾಜೇಶ್ ಗೌಡ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದರು. ಬಿ. ಸತ್ಯನಾರಾಯಣ ಅವರ ನಿಧನಿಂದಾಗಿ ಉಪ ಚುನಾವಣೆ ಎದುರಾಗಿತ್ತು. ಸತ್ಯನಾರಾಯಣ ಪತ್ನಿಗೆ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ನೀಡಿದರೂ ಅನುಕಂಪ ಮತಗಳಾಗಿ ಬದಲಾಗಲಿಲ್ಲ.
2008, 2013ರ ಚುನಾವಣೆಯಲ್ಲಿ ಶಿರಾದಲ್ಲಿ ಟಿ. ಬಿ. ಜಯಚಂದ್ರ ಗೆಲುವು ಸಾಧಿಸಿದ್ದರು. 2018ರಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ವಿರುದ್ಧ ಸೋಲು ಕಂಡಿದ್ದರು. ಉಪ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಪಡೆದು ಕಣಕ್ಕಿಳಿದರೂ ಸೋಲು ಕಂಡಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಾಣ ಮಾಡಿದೆ. ಕಳೆದ ಮೂರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು 25 ಸಾವಿರ ಮತಗಳನ್ನು ಪಡೆಯಲು ಸಹ ವಿಫಲರಾಗಿದ್ದರು. ಈ ಬಾರಿ ಗೆಲ್ಲಬೇಕು ಎಂದು ಪಣತೊಟ್ಟು ಬಿಜೆಪಿ ಅಖಾಡಕ್ಕೆ ಇಳಿದಿತ್ತು.












Click it and Unblock the Notifications