Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಭಾರಿ ಕುಸಿತ
Copra: ರಾಜ್ಯದಲ್ಲಿ ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಆದರೆ ಇದೀಗ ಇಲ್ಲಿನ ಕೊಬ್ಬರಿ ಧಾರಣೆ ದಿಢೀರ್ ಇಳಿಕೆ ಕಂಡುಬಂದಿದೆ. ಹಾಗಾದ್ರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಏಷ್ಯಾದಲ್ಲೇ ಪ್ರಸಿದ್ಧ ಪಡೆದಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿಯ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಸ್ಥಳೀಯ ತೆಂಗು ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಗರಿಷ್ಠ ಬೆಲೆಯಲ್ಲಿ ಕುಸಿತ ಕಂಡಿದೆ. ಕೆಲ ದಿನಗಳ ಹಿಂದೆಯಷ್ಟೇ ಕ್ವಿಂಟಾಲ್‌ಗೆ ₹32,666 ವರೆಗೆ ಮಾರಾಟವಾಗುತ್ತಿದ್ದ ಉಂಡೆ ಕೊಬ್ಬರಿ ಧಾರಣೆಯು, ಇತ್ತೀಚಿನ ವಹಿವಾಟಿನಲ್ಲಿ ₹28,100 ರಿಂದ ₹29,100ರ ಆಸುಪಾಸಿಗೆ ಬಂದು ನಿಂತಿದೆ.

ಕೊಬ್ಬರಿ ಧಾರಣೆ ಯಾವಾಗ ಎಷ್ಟು ರೂಪಾಯಿ? (ಕ್ವಿಂಟಾಲ್‌ಗಳಲ್ಲಿ)
* ಆಗಸ್ಟ್ ಮಧ್ಯದಲ್ಲಿ ಗರಿಷ್ಠ ಬೆಲೆ: ₹32,666
* ಸೆಪ್ಟೆಂಬರ್ ಆರಂಭದಲ್ಲಿ ಸರಾಸರಿ ಬೆಲೆ - ₹30,600
* ಪ್ರಸ್ತುತ ಬೆಲೆ (ಸೆಪ್ಟೆಂಬರ್ 10-12): ಕನಿಷ್ಠ ₹27,500, ಸರಾಸರಿ ₹28,100 ಹಾಗೂ ಗರಿಷ್ಠ ₹29,100 ದಾಖಲಾಗಿದೆ.
* ಕಳೆದ ಕೆಲವೇ ವಾರಗಳಲ್ಲಿ ಕೊಬ್ಬರಿ ಬೆಲೆಯಲ್ಲಿ ಸರಿಸುಮಾರು ಶೇಕಡ 12% ರಿಂದ 14% ರಷ್ಟು ಇಳಿಕೆ ಕಂಡುಬಂದಿದೆ (ಕೆ.ಜಿ.ಗೆ ₹326 ರಿಂದ ₹281ಕ್ಕೆ ಕುಸಿತ).
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು
* ಮಳೆಗಾಲದ ನಂತರ ರೈತರು ಸಂಗ್ರಹಿಸಿಟ್ಟಿದ್ದ ಒಣ ಕೊಬ್ಬರಿಯನ್ನು ಮಾರುಕಟ್ಟೆಗೆ ತರುತ್ತಿದ್ದು, ದೈನಂದಿನ ಪೂರೈಕೆ ಹೆಚ್ಚಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.
* ನೆರೆ ರಾಜ್ಯಗಳಿಂದ ತೆಂಗಿನಕಾಯಿ ಹಾಗೂ ಇತರ ಎಣ್ಣೆ ಕೊಬ್ಬರಿ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಎಣ್ಣೆ ಮಿಲ್‌ಗಳಲ್ಲಿ ಖರೀದಿ ಮಂದಗತಿಯಲ್ಲಿದೆ.
* ಮುಂಬರುವ ಹಬ್ಬದ ದಿನಗಳಿಗೆ ಕಾಯುತ್ತಿರುವ ವರ್ತಕರು ಪ್ರಸ್ತುತ ಭಾರಿ ದರದಲ್ಲಿ ಖರೀದಿ ಮಾಡಲು ಹಿಂಜರಿಯುತ್ತಿದ್ದಾರೆ.
* ಕಳೆದ ಕೆಲ ತಿಂಗಳುಗಳಿಂದ ಸಾರ್ವಕಾಲಿಕ ದಾಖಲೆಯತ್ತ ಮುಖ ಮಾಡಿದ್ದ ಕೊಬ್ಬರಿ ಬೆಲೆಗ ಈಗ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಗೆ ಕೊಬ್ಬರಿಯ ಸರಬರಾಜು ಹೆಚ್ಚಿರುವುದು, ಬೇಡಿಕೆಯಲ್ಲಿ ತಾತ್ಕಾಲಿಕ ಇಳಿಕೆ ಮತ್ತು ನೆರೆ ರಾಜ್ಯಗಳಿಂದ ತೆಂಗಿನಕಾಯಿ ಹಾಗೂ ಎಣ್ಣೆ ಕೊಬ್ಬರಿ ಪೂರೈಕೆಯಾಗುತ್ತಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ರೈತರ ಆತಂಕ ಹಾಗೂ ಮಾರುಕಟ್ಟೆ ಸ್ಥಿತಿಗತಿ
ಕಾರ್ಮಿಕರ ಕೂಲಿ ಹಾಗೂ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿರುವ ಈ ಸಮಯದಲ್ಲಿ ಕೊಬ್ಬರಿ ಧಾರಣೆ ಕುಸಿದಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬಿಸಿ ನೀರು ಚೆಲ್ಲಿದಂತಾಗಿದೆ. ಸಾವಿರಾರು ಕ್ವಿಂಟಾಲ್ ಕೊಬ್ಬರಿಯನ್ನು ಮಾರುಕಟ್ಟೆಗೆ ತರುತ್ತಿರುವ ರೈತರು, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಪರದಾಡುವಂತಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ರೈತರ ಮನವಿ ಏನು?
* ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿ ಸರ್ಕಾರವೇ ನೇರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ತಡೆಯಲು ಸಾಧ್ಯ ಎಂಬುದು ರೈತ ಸಂಘಟನೆಗಳ ಒತ್ತಾಯವಾಗಿದೆ.
* ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ನೆಪದಲ್ಲಿ ರೈತರಿಗೆ ಶೋಷಣೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಮುಂಬರುವ ಗಣೇಶ ಚತುರ್ಥಿ, ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ದೇಶಾದ್ಯಂತ ಒಣ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಲಿದ್ದು, ಧಾರಣೆ ಮತ್ತೆ ಕ್ವಿಂಟಾಲ್‌ಗೆ ₹30,000 ಗಡಿ ದಾಟಬಹುದು ಎಂಬ ನಿರೀಕ್ಷೆಯಲ್ಲಿ ತೆಂಗು ಬೆಳೆಗಾರರಿದ್ದಾರೆ. ಆದರೆ ಪ್ರಸ್ತುತ ಮಾರುಕಟ್ಟೆಯ ಏರಿಳಿತದಿಂದ ಕಂಗೆಟ್ಟಿರುವ ತೆಂಗು ಬೆಳೆಗಾರರು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆ ಸ್ಥಿರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಕ್ಕರೆ ರೈತರ ಆತಂಕ ದೂರ ಆದಂತಾಗಲಿದೆ.


Click it and Unblock the Notifications
