Bengaluru 2nd Airport: ತುಮಕೂರು-ಶಿರಾ ನಡುವೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿ!
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಈ ವಾರದಲ್ಲೇ ಸ್ಥಳವನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ 6 ಸ್ಥಳಗಳನ್ನು ಗುರುತಿಸಲಾಗಿದ್ದು ಒಂದು ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಈ ಬೆನ್ನಲ್ಲೇ ಎರಡನೇ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ನಡುವೆ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಈ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮ, ಆದರೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ನಡುವೆ ನಿರ್ಮಿಸಿದರೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳಿಗೂ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.

ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಐಟಿ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ದೇವನಹಳ್ಳಿ ಭಾಗದಲ್ಲಿ ಐಟಿ ವಲಯ ಈಗಾಗಲೇ ಅಭಿವೃದ್ಧಿಯಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಗಡಿಭಾಗಗಳು ಕೂಡ ಇದರಿಂದ ಅಭಿವೃದ್ಧಿ ಹೊಂದಿವೆ. ಬೆಂಗಳೂರು ಪೂರ್ವ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೂ ಪ್ರಯೋಜನವಾಗಲಿದೆ ಎಂದು ಹೇಳಿದರು.
ಹೊಸೂರು ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿದೆ. ಆದ್ದರಿಂದ ತುಮಕೂರು ಅಥವಾ ಬಿಡದಿ ಬಳಿ ನಿರ್ಮಿಸುವ ಯೋಜನೆ ಇಟ್ಟುಕೊಳ್ಳಲಾಗಿತ್ತು, ವಿಮಾನ ನಿಲ್ದಾಣ ಸ್ಥಳ ಸಮೀಕ್ಷೆ ನಡೆಸಲು ಸಲಹಾ ಸಂಸ್ಥೆಗೆ ಕೊಡುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಯಾವುದೋ ಸಂಸ್ಥೆ ಹೇಳುತ್ತದೆ ಎಂದು ನಿರ್ಧಾರ ಮಾಡಬಾರದು. ಎಲ್ಲಾ ರೀತಿಯಲ್ಲೂ ಆಲೋಚಿಸಿ ದೂರದೃಷ್ಟಿ ಯೋಜನೆ ರೂಪಿಸಬೇಕು ಎಂದಿದ್ದಾರೆ.
ನೆಲಮಂಗಲ-ಕುಣಿಗಲ್ ಹೆದ್ದಾರಿ ಸ್ಥಳ ಅಂತಿಮ?
ಐದು ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಿದ್ದು ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುತು ಮಾಡಿರುವ ಸ್ಥಳವನ್ನೇ ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ. ನೆಲಮಂಗಲಕ್ಕೆ ಭವಿಷ್ಯದಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಮಾಡುವ ಯೋಜನೆಯಿದ್ದು, ತುಮಕೂರು-ಬೆಂಗಳೂರು ದಶಪಥ ಹೆದ್ದಾರಿ ಕೂಡ ನಿರ್ಮಾಣವಾಗುತ್ತಿರುವ ಕಾರಣ, ಸಂಚಾರಕ್ಕೂ ಅನುಕೂಲಕರವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾರೋಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಕುತೂಹಲಗಳಿಗೂ ಇನ್ನೊಂದು ವಾರದಲ್ಲಿ ತೆರೆ ಬೀಳುವ ಸಾಧ್ಯತೆ ಇದೆ.












Click it and Unblock the Notifications