ಮೋದಿಯನ್ನು ಹೊಗಳಿದ್ದಕ್ಕೆ ಶಶಿ ತರೂರ್ ಗೆ ಕಾಂಗ್ರೆಸ್ ನಿಂದ ನೋಟಿಸ್?
ತಿರುವನಂತಪುರಂ, ಆಗಸ್ಟ್ 27: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವ ಕಾಂಗ್ರೆಸ್ ನಾಯಕರ ಪಟ್ಟಿಗೆ ಸಂಸದ ಶಶಿ ತರೂರ್ ಅವರೂ ಸೇರಿದ್ದು ಹಳೇ ವಿಷಯ. ಆದರೆ ಅದಕ್ಕಾಗಿ ಅವರು ಕಾಂಗ್ರೆಸ್ ಪಕ್ಷದಿಂದ ನೊಟಿಸ್ ಪಡೆಯಲಿದ್ದಾರೆ!
ವಿರೋಧಪಕ್ಷದಲ್ಲಿದ್ದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದು ಏಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗುತ್ತಿದೆ.
ಅಚ್ಚರಿಯ ಸುದ್ದಿ: ಮೋದಿ ಪರ ನಿಂತ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್!
"ನಾವು ಮೋದಿಯವರನ್ನು ಕಾಂಗ್ರೆಸ್ ಪಕ್ಷದ 'ಖರ್ಚಿನಲ್ಲಿ' ಹೊಗಳಿಲ್ಲ. ನಾನು ಆರು ವರ್ಷಗಳಿಂದಲೂ ಮೋದಿ ಅವರನ್ನು ಟೀಕಿಸುತ್ತಲೇ ಬಂದಿದ್ದೇನೆಂದು ನಿಮಗೂ ಗೊತ್ತು. ಆದರೆ ಅವರ ಉತ್ತಮ ನಡೆಯನ್ನು ಮೆಚ್ಚುವ ಉದಾರತೆ ತೋರುವುದರಿಂದ ನಮ್ಮ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ. ಎಲ್ಲವನ್ನೂ ವಿರೋಧಿಸಲೇಬೇಕೆಂದಿಲ್ಲ" ಎಂದು ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ಮಾತನಾಡುತ್ತ, "ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮತ್ತು ಅಭಿಷೇಕ್ ಮನು ಸಿಂಗ್ವಿ ಅವರು ಮೋದಿಯವರ ಎಲ್ಲಾ ನಡೆಯನ್ನೂ ತಪ್ಪು ಎನ್ನುವುದಕ್ಕಾಗುವುದಿಲ್ಲ. ಅವರ ಕೆಲವು ನಡೆಯನ್ನು ಮೆಚ್ಚಬೇಕು. ಅದಿಲ್ಲದೆ ಎರಡನೇ ಬಾರಿಗೂ ಅವರಿಗೆ ಇಂಥ ಜನಾದೇಶ ದೊರಕುತ್ತಿರಲಿಲ್ಲ ಎಂಬ ಹೇಳಿಕೆ ನೀಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಅವರ ಮಾತಿಗೆ ನನ್ನದೂ ಬೆಂಬಲವಿದೆ" ಎಂದಿದ್ದರು.
ಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕ
ಆದರೆ ಅವರ ನಡೆಯನ್ನು ಕೇರಳ ಕಾಂಗ್ರೆಸ್ ಘಟಕ ಪ್ರಶ್ನಿಸಿದ್ದು, 'ವಿರೋಧ ಪಕ್ಷದವರಾಗಿ ಆಡಳಿತ ಪಕ್ಷವನ್ನು ಹೊಗಳುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ, ಈ ಬಗ್ಗೆ ನೀವು ಸ್ಪಷ್ಟನೆ ನೀಡಬೇಕು' ಎಂದಿದೆ.