ಶಬರಿಮಲೆ: ದೇವಸ್ಥಾನದ ಬಳಿ ಕರ್ತವ್ಯಕ್ಕೆ 50 ವರ್ಷ ಮೀರಿದ ಮಹಿಳಾ ಪೊಲೀಸರು
ತಿರುವನಂತಪುರಂ, ನವೆಂಬರ್ 5: ಶಬರಿಮಲೆ ದೇವಸ್ಥಾನದ ಇತಿಹಾಸದಲ್ಲಿಯೇ ದೇವಸ್ಥಾನದ ಆವರಣದಲ್ಲಿ ಭದ್ರತೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.
ದೇವಾಲಯದ ಒಳಭಾಗದಲ್ಲಿ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತಲಿನ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸೋಮವಾರ ದೇವಸ್ಥಾನದ ಬಾಗಿಲು ಭಕ್ತರಿಗೆ ತೆರೆದಿದ್ದು, 10-50 ವರ್ಷದ ವಯೋಮಾನದ ಯಾವ ಮಹಿಳೆಯರೂ ಅಲ್ಲಿ ಕಂಡುಬರಲಿಲ್ಲ. ಆದರೆ, ತನ್ನ ಪತಿ ಹಾಗೂ ಮಗುವಿನೊಂದಿಗೆ ಅಯ್ಯಪ್ಪನ ದರ್ಶನಕ್ಕೆ ಬಂದಿದ್ದ 25 ವರ್ಷದ ಅಂಜು ಎಂಬುವವರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡದೆ ಘಟನೆ ವರದಿಯಾಗಿದೆ.

ಅಂಜು ಅವರಿಗೆ ಪ್ರವೇಶ ನೀಡಬಾರದು ಎಂದು ಭಕ್ತರು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಮುಜುಗರಕ್ಕೆ ಒಳಗಾದ ಅವರು ವಾಪಸ್ ನಡೆದರು.
ಅಹಿತಕರ ಘಟನೆಗಳು ಸಂಭವಿಸಿದಂತೆ ತಡೆಯಲು ದೇವಸ್ಥಾನದ ಆವರಣದೊಳಗಿನ ಸನ್ನಿಧಾನಂನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ, ಈ ಮಹಿಳಾ ಪೊಲೀಸರು ಕೂಡ 50 ವರ್ಷ ಮೀರಿದವರಾಗಿದ್ದಾರೆ.












Click it and Unblock the Notifications