ಮತಗಟ್ಟೆ ಸಮೀಕ್ಷೆ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಭಾರಿ ಮುನ್ನಡೆ, ಪಿಣರಾಯಿ ಸರ್ಕಾರಕ್ಕೆ ಆಘಾತ
ಕೇರಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಕುತೂಹಲ ಕೆರಳಿಸಿದ್ದ ಎಕ್ಸಿಟ್ ಪೋಲ್ (ಚುನಾವಣೋತ್ತರ ಸಮೀಕ್ಷೆ) ವರದಿಗಳು ಹೊರಬೀಳಲಾರಂಭಿಸಿವೆ. ಸಮೀಕ್ಷಾ ಸಂಸ್ಥೆಯಾದ ʼಆಕ್ಸಿಸ್ ಮೈ ಇಂಡಿಯಾʼ, 'ಪೀಪಲ್ಸ್ ಪಲ್ಸ್', ʼಪೀಪಲ್ಸ್ ಇನ್‌ಸೈಟ್ʼ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೇರಳದಲ್ಲಿ ಈ ಬಾರಿ ಅಧಿಕಾರ ಬದಲಾವಣೆಯಾಗುವ ಸ್ಪಷ್ಟ ಮುನ್ಸೂಚನೆ ಸಿಕ್ಕಿದೆ. ದಶಕಗಳ ಕಾಲದಲ್ಲಿದ್ದ ಆಡಳಿತದ ಸಂಪ್ರದಾಯವನ್ನು ಮುರಿದು ಸತತ ಎರಡು ಬಾರಿ ಅಧಿಕಾರದಲ್ಲಿದ್ದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಈ ಬಾರಿ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸಿ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಗೆಲುವಿಗೆ ಬೇಕಾದ ಮ್ಯಾಜಿಕ್ ನಂಬರ್
ಕೇರಳದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 71 ಸ್ಥಾನಗಳನ್ನು (ಮ್ಯಾಜಿಕ್ ನಂಬರ್) ಗೆಲ್ಲಬೇಕಾಗುತ್ತದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಒಟ್ಟು ಸುಮಾರು 2.71 ಕೋಟಿ ಮತದಾರರ ಪೈಕಿ ಈ ಬಾರಿ ಶೇಕಡಾ 79.63ರಷ್ಟು (ಅಂಚೆ ಮತಗಳನ್ನೂ ಸೇರಿಸಿ) ಭಾರಿ ಮತದಾನವಾಗಿದೆ. ಕಳೆದ ಚುನಾವಣೆಗಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದು, ಈ ನಿರ್ಣಾಯಕ ಚುನಾವಣೆಯ ಬಗ್ಗೆ ಜನರಿಗಿರುವ ತೀವ್ರ ಆಸಕ್ತಿಯನ್ನು ಮತ್ತು ಆಡಳಿತ ವಿರೋಧಿ ಅಲೆಯ ಸಾಧ್ಯತೆಯನ್ನು ತೋರಿಸುತ್ತದೆ.

ಸಮೀಕ್ಷೆಗಳ ಪ್ರಮುಖ ವರದಿಗಳ ಪ್ರಕಾರ, ಕೇರಳದ ಮತದಾರರು ಈ ಬಾರಿ ಬದಲಾವಣೆಯತ್ತ ಒಲವು ತೋರಿದ್ದಾರೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್.ಡಿ.ಎಫ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದುಕಾಣುತ್ತಿದೆ. ಇದರ ನೇರ ಲಾಭ ವಿ.ಡಿ. ಸತೀಶನ್ ಮತ್ತು ಮುಖಂಡರ ನೇತೃತ್ವದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಿಗಲಿದೆ. ರಾಜ್ಯದ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಸಮಸ್ಯೆ ಮತ್ತು ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಕೇಳಿಬಂದ ಕೆಲವು ಆರೋಪಗಳು ಆಡಳಿತಾರೂಢ ಎಲ್.ಡಿ.ಎಫ್‌ಗೆ ಮುಳುವಾಗಿವೆ ಎಂದು ಈ ಸಮೀಕ್ಷೆಗಳು ವಿಶ್ಲೇಷಿಸಿವೆ.
ಮತ್ತೊಂದೆಡೆ, ಕೇರಳದಲ್ಲಿ ನೆಲೆಯೂರಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ (NDA) ಮೈತ್ರಿಕೂಟ ಈ ಬಾರಿಯೂ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ ಎಂದು ವರದಿ ತಿಳಿಸಿದೆ. ಎನ್‌ಡಿಎ ತನ್ನ ಮತ ಹಂಚಿಕೆಯಲ್ಲಿ ಕೊಂಚ ಏರಿಕೆ ಕಂಡರೂ, ಅದನ್ನು ನಿರೀಕ್ಷಿತ ಮಟ್ಟದಲ್ಲಿ ಗೆಲುವಿನ ಸ್ಥಾನಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲವಾಗಲಿದೆ ಎಂಬುದು ವರದಿಯ ಸಾರಾಂಶ.
ಕರ್ನಾಟಕ ಮತ್ತು ತೆಲಂಗಾಣ ಮಾದರಿಯಲ್ಲಿ ಕಾಂಗ್ರೆಸ್ ಘೋಷಿಸಿದ 'ಗ್ಯಾರೆಂಟಿ' ಯೋಜನೆಗಳು ಕೇರಳದ ಮತದಾರರ ಮೇಲೆ, ವಿಶೇಷವಾಗಿ ಮಹಿಳೆಯರು ಮತ್ತು ಯುವಜನರ ಮೇಲೆ ಸಾಕಷ್ಟು ಪ್ರಭಾವ ಬೀರಿದಂತೆ ಕಾಣುತ್ತಿದೆ. ಈ ಆಕರ್ಷಕ ಭರವಸೆಗಳು ಯುಡಿಎಫ್‌ಗೆ ಮ್ಯಾಜಿಕ್ ನಂಬರ್ 71 ಸುಲಭವಾಗಿ ದಾಟಲು ಸಹಾಯ ಮಾಡಲಿವೆ ಎಂದು ಅಂದಾಜಿಸಲಾಗಿದೆ.
ಆದರೆ, ಇದೊಂದು ಕೇವಲ ಚುನಾವಣೋತ್ತರ ಸಮೀಕ್ಷೆಯಾಗಿದ್ದು, ಇದುವೇ ಅಂತಿಮ ಫಲಿತಾಂಶವಲ್ಲ ಎಂಬುದು ನೆನಪಿರಲಿ. ಎಷ್ಟೋ ಬಾರಿ ಇಂತಹ ಸಮೀಕ್ಷೆಗಳು ತಲೆಕೆಳಗಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಹೀಗಾಗಿ, ಅಧಿಕೃತ ಮತ ಎಣಿಕೆಯ ದಿನದಂದು ಕೇರಳದ ಜನತೆ ಯಾರ ಕೈಹಿಡಿದಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಅಲ್ಲಿಯವರೆಗೆ ಎಲ್ಲರೂ ಕಾದು ನೋಡಬೇಕು.













Click it and Unblock the Notifications