ಪ್ರವಾಸಿಗರೇ ಎಚ್ಚರ! ಕೇರಳದಲ್ಲಿ ಮತ್ತೆ ಭಾರೀ ಮಳೆಯ ರೆಡ್ ಅಲರ್ಟ್
Recommended Video

ತಿರುವನಂತಪುರಂ, ಅಕ್ಟೋಬರ್ 3: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಭಾನುವಾರದಂದು ಕೇರಳದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಬೀಸಬಹುದು ಎಂದು ಮುನ್ನೆಚ್ಚರಿಕೆಯಾಗಿ ತಿಳಿಸಲಾಗಿದೆ. ಲಕ್ಷದ್ವೀಪ ಕರಾವಳಿ ವ್ಯಾಪ್ತಿಯುದ್ದಕ್ಕೂ ಇದರ ಪ್ರಭಾವ ಆಗುವ ಬಗ್ಗೆ ತಿಳಿಸಲಾಗಿದೆ. ಶುಕ್ರವಾರದೊಳಗೆ ಮೀನುಗಾರರು ಸುರಕ್ಷಿತ ಸ್ಥಳಗಳನ್ನು ತಲುಪುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ನೀಡಿದ್ದಾರೆ.
ವಿಕೋಪ ನಿರ್ವಹಣ ಅಧಿಕಾರಿಗಳು ಸನ್ನಿವೇಶದ ವಿಶ್ಲೇಷಣೆ ಮಾಡುತ್ತಿದ್ದಾರೆ. ಈಗಾಗಲೇ ನಾವು ಕೇಂದ್ರ ಸಂಸ್ಥೆಗಳ ನೆರವಿಗೆ ಮನವಿ ಮಾಡಿದ್ದೇವೆ. ಹಾಗೂ ಎನ್ ಡಿಆರ್ ಎಫ್ ತಂಡ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಪ್ರವಾಸಿಗರು ಬೆಟ್ಟ ಪ್ರದೇಶಗಳಿಗೆ ತೆರಳಬಾರದು. ಅದರಲ್ಲೂ ನೀಲಿ ಹೂವುಗಳನ್ನು ನೋಡುವ ಸಲುವಾಗಿ ಮುನ್ನಾರ್ ಗೆ ಹೋಗುವುದು ಬೇಡ ಎಂದು ಅವರು ಹೇಳಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಶತಮಾನದಲ್ಲೇ ಭೀಕರವಾದ ಮಳೆ-ಪ್ರವಾಹ ಪರಿಸ್ಥಿತಿಯನ್ನು ಕೇರಳ ಕಂಡಿದೆ. ಸರಕಾರದ ಪ್ರಕಾರ ನಾನೂರಾ ನಲವತ್ಮೂರು ಮಂದಿ ಆ ವೇಳೆ ಮೃತಪಟ್ಟಿದ್ದಾರೆ. ರಾಜ್ಯದ ಹದಿನಾಲ್ಕು ಜಿಲ್ಲೆಯ ಐವತ್ನಾಲ್ಕು ಲಕ್ಷ ಮಂದಿ ಮಳೆಯ ಪರಿಣಾಮ ಅನುಭವಿಸಿದ್ದಾರೆ.












Click it and Unblock the Notifications