ವಯನಾಡು ಪ್ರವಾಹ: ಸಂತ್ರಸ್ತರಿಗೆ 'ರಾಹುಲ್ ಗಾಂಧಿ ಕಿಟ್'
ತಿರುವನಂತಪುರಂ, ಆ 17: ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದ್ದ ವಯನಾಡು ಜಿಲ್ಲೆಗೆ ಮುಂದಿನ ವಾರದ ಆದಿಯಲ್ಲಿ ಅಲ್ಲಿನ ಸಂಸದ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಮಳೆ, ಭೂಕುಸಿತದಿಂದ ತತ್ತರಿಸಿ ಹೋಗಿರುವ ವಯನಾಡಿನಲ್ಲಿ ಭಾರೀ ಸಾವುನೋವು ಸಂಭವಿಸಿತ್ತು. ಕಳೆದ ಬಾರಿ ನೆರೆ ಸಂತ್ರಸ್ತರನ್ನು ಭೇಟಿಯಾಗಿದ್ದ ರಾಹುಲ್, ಪರಿಹಾರದ ಭರವಸೆಯನ್ನು ನೀಡಿದ್ದರು.
ಅದರಂತೆ, ಸುಮಾರು ಹದಿನೆಂಟು ಸಾವಿರ ಸಂತ್ರಸ್ತರ ಕುಟುಂಬಕ್ಕೆ ರಾಹುಲ್ ಗಾಂಧಿ ಪರಿಹಾರದ ಕಿಟ್ ಅನ್ನು ವಿತರಿಸಲಿದ್ದಾರೆ. ಕೇರಳದ ವಿವಿಧ ಗಂಜಿ ಕೇಂದ್ರಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.

" ರಾಹುಲ್ ಗಾಂಧಿ ಬರುವ ವಾರ ಆಗಸ್ಟ್ ಇಪ್ಪತ್ತರಂದು ವಯನಾಡಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಆ ಸಮಯದಲ್ಲಿ ಪರಿಹಾರದ ಕಿಟ್ ಅನ್ನು ಅವರು ವಿತರಿಸಲಿದ್ದಾರೆ' ಎಂದು ರಾಹುಲ್ ಕಚೇರಿಯ ಕಾರ್ಯದರ್ಶಿಗಳು ಹೇಳಿದ್ದಾರೆ.
"ಪರಿಹಾರದ ಕಿಟ್ ಮೂರು ವಿಧದಲ್ಲಿ ಇರಲಿದೆ. ಮೊದಲನೇ ಕಿಟ್ ನಲ್ಲಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಮುಂತಾದವು ಇರಲಿದೆ. ಎರಡನೇ ಕಿಟ್ ನಲ್ಲಿ ಸ್ವಚ್ಚತಾ ಸಾಮಗ್ರಿಗಳು, ಮೂರನೇ ಕಿಟ್ ನಲ್ಲಿ ಹೊದಿಕೆಗಳು ಇರಲಿವೆ" ಎಂದು ಕಾರ್ಯದರ್ಶಿಗಳು ಹೇಳಿದ್ದಾರೆ.
ಕಳೆದ ಒಂದು ವಾರದಿಂದಲೂ ಕೇರಳದಲ್ಲಿ ಸುರಿದ ಭಾರಿ ಮಳೆಯಿಂದ ವಯನಾಡು, ಕೋಯಿಕ್ಕೋಡ್, ಕೊಚ್ಚಿನ್, ಕಾಸರಗೋಡು, ಕಣ್ಣೂರು ಸೇರಿದಂತೆ, ಹಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ವಯನಾಡಿನಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿ ಹಲವರು ಜೀವ ಕಳೆದುಕೊಂಡಿದ್ದರು. (ಚಿತ್ರ: ಪಿಟಿಐ)












Click it and Unblock the Notifications