ಕೇರಳ ಹಾರರ್! ನಡುಬೀದಿಯಲ್ಲೇ ಮಹಿಳಾ ಪೊಲೀಸ್ ಸಿಬ್ಬಂದಿಗೆ ಬೆಂಕಿಹಚ್ಚಿ ಕೊಂದ ಸಹದ್ಯೋಗಿ
ತಿರುವನಂತಪುರಂ, ಜೂನ್ 15: ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತಹ ಘಟನೆ ಅಲಪುಳ ಜಿಲ್ಲೆಯಿಂದ ವರದಿಯಾಗಿದ್ದು, ಪೊಲೀಸ್ ಸಿಬ್ಬಂದಿಯೊಬ್ಬ, ತಮ್ಮ ಮಹಿಳಾ ಅಧಿಕಾರಿಯನ್ನೇ ಬೆಂಕಿಹಚ್ಚಿ ಕೊಂದಿದ್ದಾನೆ.
ರಾಜ್ಯದ ಅಲಪುಳ ಜಿಲ್ಲೆಯ ವಳ್ಳಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ಈ ಘಟನೆ ವರದಿಯಾಗಿದ್ದು, ದುರಂತ ಸಾವು ಕಂಡ ಪೊಲೀಸ್ ಅಧಿಕಾರಿಯನ್ನು ಸೌಮ್ಯ ಪುಷ್ಪಾಕರನ್ (34) ಎಂದು ಗುರುತಿಸಲಾಗಿದೆ.
ಸೌಮ್ಯ, ವಳ್ಳಿಕುನ್ನಂ ಠಾಣೆಯ ಅಧಿಕಾರಿಯಾಗಿದ್ದು, ಮೊದಲ ಶಿಫ್ಟ್ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ, ಅಳುವಾ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಜಾಜ್ ಎನ್ನುವ ಪೊಲೀಸ್ ಸಿಬ್ಬಂದಿ ಈ ಕೃತ್ಯವನ್ನು ಎಸಗಿದ್ದಾನೆ.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಸೌಮ್ಯ ತೆರಳುತ್ತಿದ್ದ ವೇಳೆ, ಕಾರಿನಲ್ಲಿ ಬಂದ ಎಜಾಜ್, ಆಕೆಯ ವಾಹನವನ್ನು ತಡೆಗಟ್ಟಿ, ಆಕೆಗೆ ಚಾಕುವಿನಿಂದ ಇರಿದು, ನಂತರ ಸೀಮೆಯೆಣ್ಣೆ ಸುರಿದು, ಬೆಂಕಿಹಚ್ಚಿದ್ದಾನೆ. ಸೌಮ್ಯ, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಸಿವಿಲ್ ಪೊಲೀಸ್ ಆಫೀಸರ್ ಆಗಿರುವ ಸೌಮ್ಯ, ಮೂರು ಮಕ್ಕಳ ತಾಯಿಯಾಗಿದ್ದು, ಈಕೆಯ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಎಜಾಜ್ ಇನ್ನೂ ಪ್ರಜ್ಞೆ ಕಳೆದುಕೊಂಡಿರುವುದರಿಂದ, ಯಾವ ಕಾರಣಕ್ಕಾಗಿ ಸೌಮ್ಯ ಅವರನ್ನು ಕೊಲೆಗೈದಿದ್ದಾನೆಂದು ತಿಳಿದುಬಂದಿಲ್ಲ.
ಸೌಮ್ಯಗೆ ಬೆಂಕಿಹಚ್ಚುವ ವೇಳೆ ಎಜಾಜ್ ಗೂ ಗಾಯಗಳಾಗಿದ್ದು ಅವರನ್ನು ಅಲಪುಳ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಕೆ ಎಂ ಟೋಮಿ ಮಾಧ್ಯಮದವರಿಗೆ ಹೇಳಿದ್ದಾರೆ.












Click it and Unblock the Notifications