ಧರ್ಮ ದ್ವೇಷ ಕಾರಿದ ಕೇರಳ ಬಾಲಕನ ತಂದೆ ಸೇರಿ 20 ಮಂದಿ ಬಂಧನ
ತಿರುವನಂತಪುರಂ, ಮೇ 28: ಕಳೆದ ವಾರ ಅಲಪ್ಪುಳದಲ್ಲಿ ನಡೆದ ಪಿಎಫ್‌ಐ ಸಮಾವೇಶದಲ್ಲಿ ಅನ್ಯಧರ್ಮೀಯರ ವಿರುದ್ಧ ದ್ವೇಷಭರಿತ ಘೋಷಣೆಗಳನ್ನು ಕೂಗಿದ್ದ 11 ವರ್ಷದ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ 20 ಮಂದಿ ಬಂಧಿತರಾದಂತಾಗಿದೆ.
ಮೇ 21ರಂದು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸಿದ್ದ ಸಮಾವೇಶದಲ್ಲಿ ವ್ಯಕ್ತಿಯೊಬ್ಬರ ತೋಳಿನ ಮೇಲೆ ಕೂತಿದ್ದ 11 ವರ್ಷದ ಬಾಲಕ ಹಿಂದೂ ಮತ್ತು ಕ್ರೈಸ್ತ ಧರ್ಮೀಯರ ವಿರುದ್ಧ ಉದ್ರೇಕಕಾರಿ ಎನಿಸುವ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯ ಇರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಎಲ್ಲೆಡೆ ಶೇರ್ ಆಗುತ್ತಿರುವಂತೆಯೇ ಆ ಬಾಲಕನ ಕುಟುಂಬದವರು ಕೊಚ್ಚಿ ನಗರದಲ್ಲಿ ಅಡಗಿಕೊಂಡಿದ್ದಾರೆ. ಸಮಾವೇಶ ನಡೆದ ಎರಡು ದಿನದಲ್ಲಿ ಪೊಲೀಸರು ಬಾಲಕನ ಜಾಡು ಹಿಡಿದು ವಶಕ್ಕೆ ತೆಗೆದುಕೊಳ್ಳುತ್ತಾರೆ. ಇಂದು ಶನಿವಾರ ಬಾಲಕನ ತಂದೆ ಅಲಪ್ಪುಳದಲ್ಲಿರುವ ತಮ್ಮ ಮನೆಗೆ ವಾಪಸ್ ಬರುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಸಿಎಎ ಪ್ರತಿಭಟನೆಯಲ್ಲಿ ಬಳಸಿದ್ದ ಸ್ಲೋಗನ್
ಬೇರೆ ಧರ್ಮವನ್ನು ನಿಂದಿಸುವ ಘೋಷಣೆಗಳನ್ನು ಕೂಗಿಲ್ಲ ಎಂದು ಬಾಲಕನ ತಂದೆ ಹೇಳಿಕೆ ನೀಡಿದ್ಧಾರೆ. "ಹಿಂದೆ ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳಲ್ಲಿ ಬಳಸುತ್ತಿದ್ದ ಸ್ಲೋಗನ್‌ಗಳನ್ನೇ ಕಳೆದ ವಾರದ ಕಾರ್ಯಕ್ರಮದಲ್ಲೂ ಕೂಗಿದ್ದೆವು. ನಾವು ಯಾವ ಧರ್ಮವನ್ನೂ ಗುರಿಯಾಗಿಸಿ ಕೂಗಿದ್ದಲ್ಲ. ಅದು ನಮ್ಮ ಪಕ್ಷದ ಚಟುವಟಿಕೆ ಒಂದು ಭಾಗ" ಎಂದು ಪಿಎಫ್‌ಐ ಕಾರ್ಯಕರ್ತರೂ ಆಗಿರುವ ಅವರು ಸ್ಪಷ್ಟಪಡಿಸಿದ್ಧಾರೆ.
"ಅದು ಹಿಂದೂ ಅಥವಾ ಕ್ರೈಸ್ತರ ವಿರುದ್ಧವಲ್ಲ, ಸಂಘ ಪರಿವಾರದ ವಿರುದ್ಧ ಮಾತ್ರ ಕೂಗಿದ ಸ್ಲೋಗನ್ ಆಗಿತ್ತು. ಸಿಎಎ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳಲ್ಲೂ ಈ ಸ್ಲೋಗನ್ ಕೂಗಲಾಗಿತ್ತು" ಎಂದು ಬಾಲಕನ ತಂದೆ ಹೇಳಿದ್ಧಾರೆ.
ಬಾಲಕ ಕಲಿತಿದ್ದು ಹೇಗೆ?
ಕಳೆದ ವಾರ ನಡೆದ ಪಿಎಫ್‌ಐ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಎನಿಸುವ ಘೋಷಣೆಗಳನ್ನು ಕೂಗಿದ್ದ ಬಾಲಕ, ತನಗೆ ಈ ಸ್ಲೋಗನ್‌ಗಳು ಹೇಗೆ ಗೊತ್ತಾದವು ಎಂಬುದನ್ನು ತಿಳಿಸಿದ್ಧಾನೆ. ಈತ ಹಿಂದೆ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನಾ ಕಾರ್ಯಕ್ರಮಕ್ಕೆ ಹೋಗಿದ್ದಾಗ ಘೋಷಣೆಗಳು ಕೂಗುವುದನ್ನು ಕೇಳಿಸಿಕೊಂಡು ಅದನ್ನು ಕಂಠಪಾಠ ಮಾಡಿಕೊಂಡಿದ್ದನಂತೆ.

ಕೇರಳ ಸರಕಾರ ಈ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡುವ ಸಾಧ್ಯತೆ ಇದೆ. ದ್ವೇಷಭರಿತ ಘೋಷಣೆಗಳನ್ನು ಕೂಗಿತೆನ್ನಲಾದ ಬಾಲಕನಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ಕೊಡುವಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದೇವೆ ಎಂದು ಮಟ್ಟಂಚೇರಿಯ ಎಸಿಪಿ ರವೀಂದ್ರನಾಥ್ ಹೇಳಿದ್ದಾರೆ.
ಅಲಪ್ಪುಳದಲ್ಲಿ ಈ ಹಿಂದೆ ಬಹಳ ಸಲ ರಾಜಕೀಯ ಹತ್ಯೆಗಳಾಗಿದ್ದಿದೆ. ಕಳೆದ ವರ್ಷ 12 ಗಂಟೆಗಳ ಅಂತರದಲ್ಲಿ ಎಸ್‌ಡಿಪಿಐನ ರಾಜ್ಯ ಮುಖಂಡ ಮತ್ತು ಬಿಜೆಪಿ-ಆರೆಸ್ಸೆಸ್‌ನ ಮುಖಂಡ ಈ ಇಬ್ಬರ ಹತ್ಯೆಯಾಗಿತ್ತು.
ಇನ್ನು, ಕಳೆದ ವಾರ, ಮೇ 21ರಂದು ಪಿಎಫ್‌ಐ ಸಮಾವೇಶ ನಡೆಯುವುದಕ್ಕೂ ಮುನ್ನ ಬಜರಂಗ ದಳ ಸಂಘಟನೆಯ ಕಾರ್ಯಕರ್ತರು ಅಲಪ್ಪುಳದಲ್ಲಿ ಶೌರ್ಯ ಸಮಾವೇಶ ನಡೆಸಿದ್ದರು. "ಈ ದೇಶವನ್ನು ರಾಷ್ಟ್ರವಿರೋಧಿ ಮತ್ತು ಕೋಮುವಾದಿಗಳ ಕೈಗೆ ಒಪ್ಪಿಸಬಾರದು" ಎಂಬಿತ್ಯಾದಿ ಘೋಷಣೆಗಳು ಆ ಕಾರ್ಯಕ್ರಮದಲ್ಲಿ ಮಾರ್ದನಿಸಿದ್ದವು.
(ಒನ್ಇಂಡಿಯಾ ಸುದ್ದಿ)












Click it and Unblock the Notifications