ನೈತಿಕ ಪೊಲೀಸ್‌ಗಿರಿ: ಕೇರಳದಲ್ಲಿ 5 ಮಂದಿ ಬಂಧನ
ತಿರುವನಂತಪುರಂ,ಜುಲೈ. 26: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್‌ಕಾಡ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಗುಂಪಿನ ಮೇಲೆ ನೈತಿಕ ಪೊಲೀಸ್‌ಗಿರಿ ಮತ್ತು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕಳೆದ ಶುಕ್ರವಾರ ಸಂಜೆ ಶಾಲಾ ವಿದ್ಯಾರ್ಥಿಗಳು ಮತ್ತು ಬಾಲಕಿಯರ ಗುಂಪು ಒಟ್ಟಿಗೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು.
ಸ್ಥಳೀಯ ವ್ಯಕ್ತಿಯೊಬ್ಬ ಗುಂಪಿನಲ್ಲಿದ್ದ ಹುಡುಗಿಯನ್ನು ನಿಂದಿಸಿದ್ದಾನೆ ಎಂದು ವಿದ್ಯಾರ್ಥಿಗಳು ಆತನ ಮೇಲೆ ಆರೋಪ ಮಾಡಿದ್ದರು. ಬಳಿಕ ಕೆಲವು ಸ್ಥಳೀಯರು ವಿದ್ಯಾರ್ಥಿಗಳಿಗೆ ಥಳಿಸಿದ್ದರು. ಇಲ್ಲಿ ಕೆಲವರು ಹುಡುಗ ಹುಡುಗಿಯರನ್ನು ಒಟ್ಟಿಗೆ ನೋಡಿದಾಗ ಇಂತಹ ಘಟನೆಗಳು ನಿತ್ಯ ನಡೆಯುತ್ತಿವೆ ಎಂದು ವಿದ್ಯಾರ್ಥಿಗಳು ಈ ಬಗ್ಗೆ ಆರೋಪಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ 341, 323, 324 294 ಬಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ. ಬಳಿಕ ಅವರಿಗೆ ಜಾಮೀನು ನೀಡಲಾಗಿದೆ. ಏತನ್ಮಧ್ಯೆ, ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯೂಸಿ) ಘಟನೆಯ ಕುರಿತು ಕಲ್ಲಾಡಿಕೋಡ್ ಪೊಲೀಸರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಿಂದ ವಿವರವಾದ ವರದಿಯನ್ನು ಕೇಳಿದೆ.
ಶುಕ್ರವಾರ ಜುಲೈ 22 ರಂದು ಕೇರಳದ ಪಾಲಕ್ಕಾಡ್‌ನ ಬಸ್ ನಿಲ್ದಾಣದಲ್ಲಿ ಕರಿಂಬಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ ಹುಡುಗ ಹುಡುಗಿಯರ ಗುಂಪಿನ ವಿದ್ಯಾರ್ಥಿಗಳ ಮೇಲೆ ಸುಮಾರು 10 ಜನರ ಗುಂಪು ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಸಿದ್ದಿಕ್ (50) ಮತ್ತು ಹರೀಶ್ (28) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಗುಂಪಿನಲ್ಲಿದ್ದ ಹುಡುಗಿಗೆ ನಿಂದನೆ
ನಾವು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆವು. ನಮ್ಮ ಪ್ರಭಾರಿ ಪ್ರಾಂಶುಪಾಲರು ಸಹ ನಮ್ಮೊಂದಿಗೆ ಇದ್ದರು. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನಮ್ಮ ಗುಂಪಿನ ಹುಡುಗಿಯನ್ನು ಅವಾಚ್ಯವಾಗಿ ನಿಂದಿಸಿದರು. ನಾವು ಅವರನ್ನು ಪ್ರಶ್ನಿಸಿದಾಗ ಇತರ ಸ್ಥಳೀಯ ನಿವಾಸಿಗಳು ಅವರೊಂದಿಗೆ ಸೇರಿಕೊಂಡು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಇಂತಹ ಘಟನೆ ಇದೇ ಮೊದಲಲ್ಲ
ಸ್ಥಳೀಯ ನಿವಾಸಿಗಳು ಯಾವಾಗಲೂ ಹುಡುಗರು ಮತ್ತು ಹುಡುಗಿಯರನ್ನು ಒಟ್ಟಿಗೆ ನೋಡಿದಾಗ ತೊಂದರೆ ನೀಡುತ್ತಾರೆ. ಶಾಲೆಯ ಬಳಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ ಎಂದು ವಿದ್ಯಾರ್ಥಿನಿ ಹೇಳಿದರು. ಕೆಲವರು ನೈತಿಕ ಪೊಲೀಸ್‌ಗಿರಿ ನಡೆಸಿ ಮಕ್ಕಳನ್ನು ಥಳಿಸುತ್ತಾರೆ. ಅಲ್ಲದೆ ಬಸ್‌ಗೆ ಬರುವುದಕ್ಕೂ ಮುನ್ನಾ ಸ್ಥಳದಿಂದ ಹೊರಡಿ ಎಂದು ಹೇಳುತ್ತಾರೆ ಎಂದು ಹಲ್ಲೆಗೊಳಗಾದ ಹುಡುಗನ ತಾಯಿ ಮಾಧ್ಯಮಗಳಿಗೆ ತಿಳಿಸಿದರು.

ಮಕ್ಕಳನ್ನು ಹೊಡೆಯಲು ಅಧಿಕಾರ ಕೊಟ್ಟವರಾರು?
ಸಂಜೆ 5.30 ರ ಸುಮಾರಿಗೆ ನನ್ನ ಮಗನಿಂದ ನನಗೆ ಕರೆ ಬಂದಿತು. ಅವರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆವನು ಹೇಳಿದನು. ಅಲ್ಲದೆ ಅವನು ಕೆಲವರು ಹೊಡೆದಾಗ ನನಗೆ ಎದೆ ಮತ್ತು ಬೆನ್ನಿನಲ್ಲಿ ಇನ್ನೂ ನೋವು ಇದೆ ಎಂದು ಹೇಳಿದನು. ಹೀಗೆ ಮಕ್ಕಳನ್ನು ಹೊಡೆಯಲು ಅವರಿಗೆ ಯಾರು ಅಧಿಕಾರ ಕೊಟ್ಟರು ಎಂದು ಹುಡುಗನ ತಾಯಿ ಪ್ರಶ್ನಿಸಿದರು.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ
ಈ ಬಗ್ಗೆ ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಬಸ್ ನಿಲ್ದಾಣಕ್ಕೆ ಬಂದಾಗ ಅಥವಾ ಒಟ್ಟಿಗೆ ನಿಂತಾಗ ಕೆಲವರು ಬಂದು ಆಗಾಗ್ಗೆ ಸಮಸ್ಯೆಯನ್ನು ಸೃಷ್ಟಿಸುತ್ತಾರೆ ಎಂದು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದು, ಉಳಿದ ಆರೋಪಿಗಳನ್ನು ಗುರುತಿಸಲು ಸಮೀಪದ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಇದಲ್ಲದೆ, ವರದಿಗಳ ಪ್ರಕಾರ, ಹಲ್ಲೆಯಲ್ಲಿ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮುಂದುವರಿದ ಬೆಳವಣಿಗೆಯಾಗಿ ಕೆಲವರನ್ನು ಬಂಧಿಸಲಾಗಿದೆ.












Click it and Unblock the Notifications