ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ
ಬ್ರಿಟನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು, ಉದ್ಯೋಗ ನೇಮಕಾತಿಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅತಿಯಾದ ಬಳಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಸಿನೆಸ್ ವಿದ್ಯಾರ್ಥಿನಿಯಾಗಿರುವ 20 ವರ್ಷದ ಭುವನಾ ಚಿಲುಕುರಿ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನರು ಎದುರಿಸುತ್ತಿರುವ ಕಷ್ಟಗಳನ್ನು ಬಿಬಿಸಿ ವಾಹಿನಿಯ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಭುವನಾ ಅವರು ಇದುವರೆಗೆ 100ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಇದುವರೆಗೂ ಒಂದೇ ಒಂದು ಆಫರ್ ಲೆಟರ್ ಬಂದಿಲ್ಲ. "ನಾನು ಕೆಲವು ಕಂಪನಿಗಳಿಗೆ ಅರ್ಜಿ ಸಲ್ಲಿಸಿದ ಕೇವಲ ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ರಿಜೆಕ್ಟ್ (ತಿರಸ್ಕೃತ) ಆದ ಸಂದೇಶ ಬಂದಿದೆ. ಇದು ನಿಜಕ್ಕೂ ಅತ್ಯಂತ ಬೇಸರದ ಹಾಗೂ ಆಘಾತಕಾರಿ ಸಂಗತಿ" ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನುಷ್ಯರ ಬದಲಿಗೆ ಯಂತ್ರಗಳ ಪರಿಶೀಲನೆ
ಇಂದಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಮನುಷ್ಯರ (HR ) ಬದಲಿಗೆ ಸಂಪೂರ್ಣವಾಗಿ ಎಐ ತಂತ್ರಜ್ಞಾನವನ್ನು ನೆಚ್ಚಿಕೊಂಡಿವೆ. ಭುವನಾ ಅವರ ಪ್ರಕಾರ, ಅವರು ಸಲ್ಲಿಸಿದ ಬಹುಪಾಲು ಅರ್ಜಿಗಳನ್ನು ಯಾವುದೇ ಮಾನವ ಸಂಪನ್ಮೂಲ ಅಧಿಕಾರಿ ನೋಡಿಯೇ ಇಲ್ಲ. "ಮೊದಲ ಹಂತದಲ್ಲಿ ನಮ್ಮ ಸಿವಿ (CV) ಅಥವಾ ರೆಸ್ಯೂಮ್ ಅನ್ನು ಎಐ ಪರಿಶೀಲಿಸುತ್ತದೆ. ಆ ಹಂತದಲ್ಲೇ ಬಹುಬೇಗನೆ ನಾವು ರಿಜೆಕ್ಟ್ ಆಗಿಬಿಡುತ್ತೇವೆ. ಒಂದು ವೇಳೆ ಅಲ್ಲಿ ಆಯ್ಕೆಯಾದರೂ, ಮುಂದಿನ ಹಂತದಲ್ಲಿ ಎಐ ವಿಡಿಯೋ ಸಂದರ್ಶನವನ್ನು ಎದುರಿಸಬೇಕಾಗುತ್ತದೆ" ಎಂದು ಅವರು ವಿವರಿಸಿದ್ದಾರೆ.
ಹಲವಾರು ಇಂಟರ್ನ್‌ಶಿಪ್‌ಗಳನ್ನು ಪೂರ್ಣಗೊಳಿಸಿ, ಕೆಲಸದ ಅನುಭವ ಪಡೆದಿದ್ದರೂ ಈ ಬೇಸಿಗೆಯಲ್ಲಿ ಪದವಿ ಮುಗಿಸುವ ಮುನ್ನ ಉದ್ಯೋಗ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಈ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಅವರು, "ಇದೆಲ್ಲವನ್ನು ನೋಡಿದರೆ ನಾನೊಬ್ಬಳು ರೋಬೋಟ್ ಎಂಬ ಭಾವನೆ ಮೂಡುತ್ತದೆ. ಸುಮಾರು 20 ನಿಮಿಷಗಳ ಕಾಲ ಸ್ಕ್ರೀನ್ ಮೇಲೆ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ, ಯಂತ್ರ ಕೇಳುವ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರಿಸಬೇಕು. ಅಲ್ಲಿ ನಮ್ಮ ಜೊತೆ ಮಾತನಾಡಲು ಯಾರೂ ಇರುವುದಿಲ್ಲ. ಇದು ನಮ್ಮ ವ್ಯಕ್ತಿತ್ವವನ್ನೇ ಕಸಿದುಕೊಂಡಂತೆ ಭಾಸವಾಗುತ್ತದೆ. ಇದು ನಿಜಕ್ಕೂ ಬೇಸರದ ಸಂಗತಿ" ಎಂದಿದ್ದಾರೆ.
ಕಡಿಮೆ ಉದ್ಯೋಗ, ಕಠಿಣ ಪೈಪೋಟಿ
ಭುವನಾ ಅವರ ಈ ನಿರಾಸೆಯು ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಕರೋನಾ ಸಾಂಕ್ರಾಮಿಕದ ನಂತರ ಉದ್ಯೋಗಾವಕಾಶಗಳು ಗಣನೀಯವಾಗಿ ಕಡಿಮೆಯಾಗಿವೆ. ಮತ್ತೊಂದೆಡೆ, ಉದ್ಯೋಗದಾತರಿಗೆ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಉದ್ಯೋಗಿಗಳಿಗೆ ಸಿಗುತ್ತಿರುವ ಬಲವಾದ ರಕ್ಷಣೆಗಳಿಂದಾಗಿ ಕಂಪನಿಗಳು ಹೊಸಬರನ್ನು ನೇಮಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿವೆ. ಅದೇ ಸಮಯದಲ್ಲಿ, ದಿನನಿತ್ಯ ಹರಿದುಬರುವ ಸಾವಿರಾರು ಅರ್ಜಿಗಳನ್ನು ನಿರ್ವಹಿಸಲು ಕಂಪನಿಗಳು ಅನಿವಾರ್ಯವಾಗಿ ಎಐ ಮೊರೆ ಹೋಗಿವೆ.
ನೇಮಕಾತಿಯಲ್ಲಿ ಅಭ್ಯರ್ಥಿಗಳ ಪೂರ್ವ-ಪರಿಶೀಲನೆಗೆ ಎಐ ಬಳಸುವ ಅಡೆಕ್ಕೊ ಗ್ರೂಪ್‌ನ ಸಿಇಒ ಡೆನಿಸ್ ಮ್ಯಾಚುಯೆಲ್ ಅವರ ಪ್ರಕಾರ, ನೇಮಕಾತಿಯ ಸ್ವರೂಪವೇ ಈಗ ಸಂಪೂರ್ಣ ಬದಲಾಗಿದೆ. "ಇಂದು ಒಂದು ಉದ್ಯೋಗ ಪಡೆಯಲು ಅಭ್ಯರ್ಥಿಗಳು ಸರಾಸರಿ 200 ಅರ್ಜಿಗಳನ್ನು ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಎಐ ತಂತ್ರಜ್ಞಾನವು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಮೊದಲೆಲ್ಲಾ 50 ಜನರನ್ನು ಸಂಪರ್ಕಿಸಿ ಒಬ್ಬನನ್ನು ಆಯ್ಕೆ ಮಾಡಿದರೆ, 49 ಜನರಿಗೆ ನಿರಾಸೆಯಾಗುತ್ತಿತ್ತು. ಆದರೆ ಈಗ 500 ಜನರನ್ನು ತಲುಪಿ, 499 ಜನರಿಗೆ ನಿರಾಸೆ ಉಂಟುಮಾಡಲಾಗುತ್ತಿದೆ" ಎಂದು ಅವರು ವಾಸ್ತವವನ್ನು ತೆರೆದಿಟ್ಟಿದ್ದಾರೆ.
ಎಐ ವರ್ಸಸ್ ಎಐ: ಇದು ಇಂದಿನ ಟ್ರೆಂಡ್
ಕಂಪನಿಗಳು ಎಐ ಟೂಲ್‌ಗಳನ್ನು ಏಕೆ ಬಳಸುತ್ತಿವೆ ಎಂಬುದು ತಮಗೆ ಅರ್ಥವಾಗುತ್ತದೆ ಎಂದಿರುವ ಭುವನಾ, ಅಭ್ಯರ್ಥಿಗಳು ಸಹ ಇದಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ ಎಂದಿದ್ದಾರೆ. "ಕಂಪನಿಗಳಿಗೆ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದೆ. ಹೀಗಾಗಿ ನಾನು ಅವರನ್ನು ದೂಷಿಸುವುದಿಲ್ಲ. ಆದರೆ, ಈ ಪ್ರಕ್ರಿಯೆಯಿಂದಾಗಿ ವಿದ್ಯಾರ್ಥಿಗಳು ಸೋಮಾರಿಗಳಾಗುತ್ತಿದ್ದಾರೆ. 'ನೀವು ಎಐ ಮೂಲಕ ನಮ್ಮನ್ನು ಸ್ಕ್ರೀನಿಂಗ್ ಮಾಡಿದರೆ, ನಾವು ಎಐ ಮೂಲಕವೇ ಅರ್ಜಿ ಸಲ್ಲಿಸುತ್ತೇವೆ' ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅವರು ತಮ್ಮ ಸಿವಿಗಳನ್ನು ಬರೆಯಲು ಎಐ ಬಳಸುತ್ತಿದ್ದಾರೆ. ಯಾರನ್ನೇ ಆಗಲಿ ದೂಷಿಸುವಂತಿಲ್ಲ, ಎಲ್ಲರೂ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಆದರೂ, ನೇಮಕಾತಿಯಲ್ಲಿ ಹೆಚ್ಚಾಗುತ್ತಿರುವ ಈ ಆಟೋಮೇಷನ್ ಬಗ್ಗೆ ಭುವನಾ ಅವರಿಗೆ ಆತಂಕವಿದೆ. "ನಾನು ಎಐ ಅನ್ನು ನಂಬುವುದಿಲ್ಲ, ನಾನು ಯಾವಾಗಲೂ ಮನುಷ್ಯರನ್ನು ನಂಬುತ್ತೇನೆ. ಆದರೆ, ಈಗೀಗ ಒಬ್ಬ ಅಧಿಕಾರಿಯನ್ನು ಎದುರುಬದುರಾಗಿ ನೋಡುವ ಅವಕಾಶವನ್ನು ಪಡೆಯುವುದೇ ಕಷ್ಟವಾಗಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications