"ಭಾರತದಲ್ಲಿ ನಾನೆಂದಿಗೂ CEO ಆಗುತ್ತಿರಲಿಲ್ಲ": ಅಮೆರಿಕ, ಚೀನಾ ಗುಣಗಾನ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಇಂದ್ರ ನೋಯಿ!
ಭಾರತದಲ್ಲಿ ಹುಟ್ಟಿ, ಜಾಗತಿಕ ಮಟ್ಟದಲ್ಲಿ ಪೆಪ್ಸಿಕೋ ಸಂಸ್ಥೆಯ ಸಿಇಒ ಆಗಿ ಮೆರೆದ ಇಂದ್ರ ನೋಯಿ, ತಮ್ಮ ಸಾಧನೆಗಳ ಮೂಲಕ ಕೋಟ್ಯಂತರ ಭಾರತೀಯರ ಪಾಲಿಗೆ ಹೆಮ್ಮೆಯ ಪ್ರತೀಕವಾಗಿದ್ದರು. ಆದರೆ, ಇಂದು ಭಾರತದ ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯನ್ನು ಅಮೆರಿಕ ಹಾಗೂ ಚೀನಾಗೆ ಹೋಲಿಸಿ ಅವರು ಇತ್ತೀಚೆಗೆ ನೀಡಿರುವ ನಕರಾತ್ಮಕ ಹೇಳಿಕೆಗಳು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿವೆ."
ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಅವರೊಂದಿಗಿನ ಸಂವಾದದ ವೇಳೆ ಪೆಪ್ಸಿಕೋ ಸಂಸ್ಥೆಯ ಮಾಜಿ ಸಿಇಒ ಇಂದ್ರ ನೋಯಿ ಅವರು ಭಾರತ, ಚೀನಾ ಮತ್ತು ಅಮೆರಿಕದ ಆಡಳಿತ ವ್ಯವಸ್ಥೆಗಳ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಅಮೆರಿಕದ ಪ್ರತಿಷ್ಠಿತ ಕಂಪನಿಯೊಂದರ ಉನ್ನತ ಹುದ್ದೆಗೇರಿದ ಅವರ ಈ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ವಿವಾದಕ್ಕೆ ನಾಂದಿ ಹಾಡಿವೆ.

ಭಾರತ ಹಾಗೂ ಚೀನಾ ಹೋಲಿಕೆ
ಭಾರತ ಮತ್ತು ಚೀನಾ ದೇಶಗಳು ಅಭಿವೃದ್ಧಿಯಲ್ಲಿ ವಿಭಿನ್ನ ಹಾದಿಗಳನ್ನು ತುಳಿಯಲು ಕಾರಣವೇನು ಎಂಬುದನ್ನು ವಿವರಿಸಿದ ಅವರು, ಭಾರತದ ಅವ್ಯವಸ್ಥೆಗೆ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬಹುಮುಖ್ಯ ಕಾರಣ ಎಂದಿದ್ದಾರೆ. "ಭಾರತದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ, ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಹೀಗಿರುವಾಗ ಅಭಿವೃದ್ಧಿಯ ವೇಗ ನಿಧಾನವಾಗುವುದು ಸಹಜ. ಆದರೆ ನನಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಖುಷಿ ಇದೆ" ಎಂದಿದ್ದಾರೆ.
ಚೀನಾದ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಆ ದೇಶವನ್ನು ಕತ್ತಲೆಯಿಂದ ಹೊರತಂದು ಜಾಗತಿಕ ಶಕ್ತಿಯಾಗಿ ಬೆಳೆಯಲು ಅಲ್ಲಿನ ಕೇಂದ್ರೀಕೃತ ಆಡಳಿತ ವ್ಯವಸ್ಥೆಯೇ ಕಾರಣ. ಭಾರತ ಈಗಲೂ ಜಾಗತಿಕ ಶಕ್ತಿಯಾಗಲು ಕಷ್ಟಪಡುತ್ತಿದೆ. ಆದರೂ ಭಾರತದಲ್ಲಿರುವ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿದ್ದು, ಸಣ್ಣ ಊರುಗಳಲ್ಲೂ ನ್ಯಾಯಾಲಯಗಳಿವೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ನಾನೆಂದೂ ಸಿಇಒ ಆಗುತ್ತಿರಲಿಲ್ಲ
ಇದೇ ವೇಳೆ ಅಮೆರಿಕದ ಅರ್ಹತಾ ಆಧಾರಿತ ವ್ಯವಸ್ಥೆ ಬಗ್ಗೆಯೂ ಅವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಾನು ಭಾರತ ಸೇರಿದಂತೆ ವಿಶ್ವದ ಬೇರೆ ಯಾವುದೇ ದೇಶದಲ್ಲಿದ್ದರೂ ಸಿಇಒ ಆಗಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಜಗತ್ತಿನ ಶ್ರೇಷ್ಠ ದೇಶದಲ್ಲಿ ಜನಿಸಿರುವ ನೀವು ಎಷ್ಟು ಅದೃಷ್ಟವಂತರು ಎಂದು ನಾನು ನನ್ನ ಹೆಣ್ಣುಮಕ್ಕಳಿಗೆ ಆಗಾಗ ಹೇಳುತ್ತಿರುತ್ತೇನೆ" ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಪ್ರತಿಭೆಗೆ ಮತ್ತು ಪರಿಶ್ರಮಕ್ಕೆ ಬೆಲೆ ಇದೆ ಹೊರತು, ವ್ಯಕ್ತಿಯ ಜಾತಿ, ಧರ್ಮ, ಲಿಂಗ ಅಥವಾ ಹಿನ್ನೆಲೆಯನ್ನಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ತಂತ್ರಜ್ಞಾನ ಎಲ್ಲಿಯೇ ಹುಟ್ಟಿದರೂ, ಅದಕ್ಕೆ ಮಾರುಕಟ್ಟೆ ಒದಗಿಸುವಲ್ಲಿ ಅಮೆರಿಕವೇ ಮುಂದು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಇಂಟರ್ನೆಟ್‌ನಲ್ಲಿ ಪರ-ವಿರೋಧ ಚರ್ಚೆ
ಇಂದ್ರ ನೋಯಿ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆ ಜೋರಾಗಿದೆ. ಕೆಲವರು ಅವರ ಮಾತನ್ನು ಬೆಂಬಲಿಸಿ, "ನಾವು ಭಾರತೀಯರು ರಚನಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಲು ಕಲಿಯಬೇಕು, ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ" ಎಂದು ಕಮೆಂಟ್ ಮಾಡಿದ್ದಾರೆ.
ಆದರೆ ಇನ್ನು ಕೆಲವರು, "ಅಮೆರಿಕದ ವ್ಯವಸ್ಥೆ ಅಷ್ಟು ಪ್ರಗತಿಪರವಾಗಿದ್ದರೆ, ಅಲ್ಲಿ ಇದುವರೆಗೂ ಒಬ್ಬ ಮಹಿಳೆ ಯಾಕೆ ಅಧ್ಯಕ್ಷರಾಗಿಲ್ಲ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಭಾರತದ ಪರಿಸರ ಮಾಲಿನ್ಯ ಮತ್ತು ಕಸದ ಸಮಸ್ಯೆಯೇ ಹೊರತು, ಇಲ್ಲಿನ ವೈವಿಧ್ಯತೆಯಲ್ಲ ಎಂದು ಕೆಲವರು ವಾದಿಸಿದ್ದಾರೆ.
"I could never have become CEO in any other country in the world, including in India..It's because the system here in America is a meritocratic system," says ex-Pepsi CEO Indira Nooyi pic.twitter.com/nOVN71lMry
— Shashank Mattoo (@MattooShashank) July 2, 2026
ಇಂದ್ರ ನೋಯಿ ಯಾರು?
ಚೆನ್ನೈನಲ್ಲಿ ಹುಟ್ಟಿ ಬೆಳೆದ ಇಂದ್ರ ನೋಯಿ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸೇರಿದರು. ನಂತರ ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಬರೋಬ್ಬರಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾದರು. ಪ್ರಸ್ತುತ ಅಮೆಜಾನ್ ಆಡಳಿತ ಮಂಡಳಿಯಲ್ಲಿರುವ ಇವರು, ವಿಶ್ವದ ಅತ್ಯಂತ ಪ್ರಭಾವಶಾಲಿ ಉದ್ಯಮಿಗಳಲ್ಲಿ ಮತ್ತು ನಾಯಕರಲ್ಲಿ ಒಬ್ಬರಾಗಿದ್ದಾರೆ.














Click it and Unblock the Notifications