ಕೊರೊನಾ ಲಸಿಕೆ ವಿತರಣೆ, ಸೋಂಕು ಎರಡರಲ್ಲೂ ಕೇರಳ ಮುಂದು
ತಿರುವನಂತಪುರಂ, ಜುಲೈ 09: ಕೇರಳದಲ್ಲಿ ಲಸಿಕೆ ವಿತರಣೆ ಪ್ರಮಾಣ ಬೇರೆ ರಾಜ್ಯಗಳಿಗಿಂತ ಹೆಚ್ಚಿದ್ದರೂ ಕೂಡ ಸೋಂಕಿನ ಪ್ರಮಾಣ ಕಿಂಚಿತ್ತೂ ಕಡಿಮೆಯಾಗಿಲ್ಲ.
ದೇಶಾದ್ಯಂತ ಕೊರೊನಾ ಎರಡನೇ ಅಲೆಯು ತಗ್ಗುತ್ತಿರುವ ಲಕ್ಷಣಗಳು ಹಲವು ರಾಜ್ಯಗಳಲ್ಲಿ ಗೋಚರವಾಗುತ್ತಿದ್ದರೂ, ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ.
ಕೇವಲ 10 ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12 ಸಾವಿರದಷ್ಟು ಏರಿಕೆಯಾಗಿರುವುದು ಮೂರನೇ ಅಲೆಯ ಭೀತಿ ಸೃಷ್ಟಿಸಿದೆ.
ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ನಿತ್ಯ 11 ರಿಂದ 13ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 80ಸಾವಿರದಿಂದ 40 ಸಾವಿರಕ್ಕೆ ಇಳಿಕೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳ
ಜೂನ್ 28ರಂದು 96,012 ಇದ್ದಂತಹ ಸಕ್ರಿಯ ಸೋಂಕಿತರ ಸಂಖ್ಯೆ ಜುಲೈ 7ಕ್ಕೆ 1.08 ಲಕ್ಷ ದಾಟಿದೆ. ಅಲ್ಲದೆ ಕಳೆದ 10 ದಿನಗಳಿಂದ ನಿತ್ಯ ಸುಮಾರು 12 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, 1.23 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 1.01 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.
ಜೂನ್ 28ರಿಂದ ಇದುವರೆಗೂ 1,119 ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ ಎರಡೇ ತಿಂಗಳಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ದೇಶದಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣವೂ 2020ರ ಜನವರಿಯಲ್ಲಿ ಕೇರಳದಲ್ಲಿಯೇ ವರದಿಯಾಗಿತ್ತು.
ಝಿಕಾ ವೈರಸ್ ಆತಂಕ
ಕೊರೊನಾ ಭೀತಿ ನಡುವೆಯೇ ಕೇರಳದಲ್ಲಿ ಜೈಕಾ ವೈರಸ್ ಸೋಂಕಿನ 10 ಪ್ರಕರಣಗಳು ವರದಿಯಾಗಿವೆ. ತಿರುವನಂತಪುರಂ ನಿವಾಸಿಗರಲ್ಲಿ ಫ್ಲಾವಿ ವೈರಸ್ ಪತ್ತೆಯಾಗಿದ್ದು, ಜ್ವರ, ತಲೆನೋವು, ಮೈಕೈ ನೋವು ಚರ್ಮದ ಮೇಲೆ ಕಲೆಗಳ ಲಕ್ಷಣಗಳು ಜೋರಾಗಿವೆ. ''ಸೊಳ್ಳೆಗಳ ಮೂಲಕ ಹರಡುವ ಈ ಸೋಂಕು, ಗರ್ಭಿಣಿಯರಲ್ಲಿ ಕಾಣಿಸಿಕೊಂಡಲ್ಲಿ ಶಿಶುವಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ," ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಶೇ.45ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ
ಕೇರಳದಲ್ಲಿ ಶೇ.45ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ, ಶೇ.10ರಷ್ಟು ಮಂದಿ ಸಂಪೂರ್ಣ ಎರಡೂ ಲಸಿಕೆಯನ್ನು ಪಡೆದಿದ್ದಾರೆ, ಮಹಾರಾಷ್ಟ್ರ ಹಾಗೂ ತಮಿಳುನಾಡಿಗಿಂತ ಉತ್ತಮ ಲಸಿಕೆ ವಿತರಣೆಯಾಗಿದೆ. ಆದರೂ ಕೊರೊನಾ ಸೋಂಕು ಮಾತ್ರ ನಿಯಂತ್ರಣಕ್ಕೆ ಬಾರದಿರುವುದು ತಲೆನೋವು ಹೆಚ್ಚಿಸಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕು
ಕೊರೊನಾ ನಿಯಂತ್ರಣ ಕಾರ್ಯಪಡೆ ಸಹ ಹಲವು ಮುಂಜಾಗ್ರತೆ ಕ್ರಮಗಳ ಜಾರಿಗೆ ಶಿಫಾರಸು ಮಾಡಿದೆ. ಇನ್ನೊಂದೆಡೆ, ಮುಂಬೈ ನಗರದಲ್ಲಿ ಕಳೆದ ಎರಡು ದಿನಗಳಿಂದ ಹೊಸ ಸೋಂಕಿನ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಮೂರನೇ ಅಲೆಯು ಆಉರುವಾಗುತ್ತಿರುವ ಆತಂಕ ಮೂಡಿದೆ. ಎರಡನೇ ಅಲೆ ಕೂಡ ನಗರದಲ್ಲಿ ಇನ್ನೂ ಮುಂದುವರಿದಿದ್ದು, ಈ ನಡುವೆಯೇ 500 ರಷ್ಟಿದ್ದ ಪ್ರಕರಣಗಳ ಸಂಖ್ಯೆ ಎರಡು ದಿನಗಳಿಂದ 650 ದಾಟುತ್ತಿರುವುದು ಆತಂಕ ಮೂಡಿಸಿದೆ.
ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಪುಣೆ ಗ್ರಾಮೀಣ, ಸತಾರ, ರತ್ನಗಿರಿ, ಸಿಂಧುದುರ್ಗ್, ಕೊಲ್ಹಾಪುರ, ಸಾಂಗ್ಲಿ, ರಾಯ್‌ಗಢ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರವು ರಾಜ್ಯದ ಸರಾಸರಿಗಿಂತ ಹೆಚ್ಚಿದೆ.
ಈ ನಿಟ್ಟಿನಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್, ಸಂಚಾರಗಳಿಗೆ ಕಠಿಣ ನಿರ್ಬಂಧ ಹೇರುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಲಸಿಕಾ ಅಭಿಯಾನ ನಡೆಸಿ , ಪ್ರಕರಣಗಳ ಸಂಖ್ಯೆ ನಿಯಂತ್ರಣ ತಪ್ಪದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸಿಎಂ ನಿರ್ದೇಶಿಸಿದ್ದಾರೆ.












Click it and Unblock the Notifications