Breaking: ಕೇರಳ; ಭೂಕುಸಿತದಲ್ಲಿ ಒಂದೇ ಕುಟುಂಬದ ಐವರು ಸಾವು
ತಿರುವನಂತಪುರಂ, ಆಗಸ್ಟ್ 29: ಕೇರಳದ ಹಲವು ಗುಡ್ಡಗಾಡು ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಡುಕ್ಕಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಜಿಲ್ಲೆಯ ತೊಡುಪುಳ ಪ್ರದೇಶದ ಕಂಜಾರ್ ಗ್ರಾಮದಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಮನೆ ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆಯಿಂದ ಕೊಚ್ಚಿಕೊಂಡು ಹೋದವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿತ್ತು. ಮೃತರು ಗ್ರಾಮದ ಟಿ ಸೋಮನ್ ಅವರ ಕುಟುಂಬಕ್ಕೆ ಸೇರಿದ್ದು, ರಕ್ಷಣಾ ಪಡೆಯ ಕಾರ್ಯಕರ್ತರು ಮನೆಯ ಸದಸ್ಯರ ಶವಗಳು 500 ಮೀಟರ್‌ಗಳಷ್ಟು ದೂರದಲ್ಲಿ ಪತ್ತೆ ಮಾಡಿದ್ದಾರೆ.

ಮೃತರನ್ನು ಕಂಜರ್ ನಿವಾಸಿಗಳಾದ ತಂಕಮ್ಮ (80), ಅವರ ಮಗ ಸೋಮನ್ (52), ಅವರ ಪತ್ನಿ ಶಾಜಿ (50), ಅವರ ಪುತ್ರಿ ಶಿಮಾ (30) ಮತ್ತು ದೇವಾನಂದ್ (5) ಎಂದು ಗುರುತಿಸಲಾಗಿದೆ.
"ನಮಗೆ ರಾತ್ರಿಯೇ ದೊಡ್ಡ ಶಬ್ದ ಕೇಳಿತ್ತು. ಆದರೆ, ಬೆಳಗ್ಗೆ ನೋಡಿದಾಗ ಮಾತ್ರ ಇಷ್ಟೊಂದು ಹಾನಿಯ ಬಗ್ಗೆ ನಮಗೆ ಅರಿವಾಯಿತು. ಇಲ್ಲಿ ಮನೆ ಇತ್ತು ಎಂಬುದಕ್ಕೂ ಯಾವುದೇ ಗುರುತು ಇಲ್ಲದಂತೆ ಆಗಿದೆ" ಎಂದು ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಆದರೆ, ಈ ಮನೆ ಭೂಕುಸಿತಕ್ಕೆ ಒಳಗಾಗುವ ಪ್ರದೇಶದಲ್ಲಿ ಇರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಮಾತನಾಡಿ, ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಅನೇಕ ನಿವಾಸಿಗಳನ್ನು ತಕ್ಷಣವೇ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.

ಕೇರಳದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ತಿರುವನಂತಪುರಂನಲ್ಲಿರುವ ಪ್ರಾದೇಶಿಕ ಹವಾಮಾನ ಕಚೇರಿ ತಿಳಿಸಿದೆ ಮತ್ತು ರಾಜ್ಯದ 14 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಕ್ಕೆ 24 ಜನರು ಸಾವನ್ನಪ್ಪಿದ್ದರು. ಇಂತಹದ್ದೆ ಪರಿಸ್ಥಿತಿಗಳು ಮುಂದುವರಿದರೆ ಹೆಚ್ಚಿನ ಪರಿಹಾರ ಶಿಬಿರಗಳನ್ನು ತೆರೆಯುವಂತೆ ರಾಜ್ಯ ಸರಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಕಂದಾಯ ಸಚಿವ ಕೆ ರಾಜನ್ ಮತ್ತು ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಸೋಮವಾರ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಭೂಕುಸಿತದ ಭೀತಿಯ ಹಿನ್ನೆಲೆಯಲ್ಲಿ ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಅವರು ಪುಲಿಯನ್ಮಲ-ತೊಡುಪುಳ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 6 ರವರೆಗೆ ರಾತ್ರಿ ಪ್ರಯಾಣವನ್ನು ನಿಷೇಧಿಸಿದ್ದಾರೆ.
ಆಗಸ್ಟ್ 7 ರಂದು ಮುನ್ನಾರ್ ಬಳಿಯ ಪುತ್ತುಕ್ಕಾಡಿ ಎಸ್ಟೇಟ್‌ನಲ್ಲಿ ಭಾರಿ ಭೂಕುಸಿತ ಸಂಭವಿಸಿ ಕೇರಳದ ಮುನ್ನಾರ್‌ನಲ್ಲಿರುವ ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇಶನ್ಸ್ (ಕೆಡಿಎಚ್‌ಪಿ) ಸಿಬ್ಬಂದಿ ಕ್ವಾರ್ಟರ್ಸ್‌ಗೆ ಹಾನಿಯಾಗಿದೆ. ಮೂರು ಅಂಗಡಿಗಳು, ದೇವಸ್ಥಾನ ಹಾಗೂ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗಿವೆ. 150 ಕುಟುಂಬಗಳ ಸುಮಾರು 450 ಜನರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಆಗಸ್ಟ್ 6, 2020 ರಂದು, ಮುನ್ನಾರ್‌ನ ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇಶನ್ ಲಿಮಿಟೆಡ್ (ಕೆಡಿಹೆಚ್‌ಪಿ) ಪೆಟ್ಟಿಮುಡಿಯಲ್ಲಿ ಭೂಕುಸಿತ ಉಂಟಾಗಿ ದೊಡ್ಡ ದುರಂತಕ್ಕೆ ಕಾರಣವಾಗಿತ್ತು. ಭೂಕುಸಿತದಲ್ಲಿ 66 ಜೀವಗಳು ಬಲಿಯಾಗಿದ್ದವು. ನಾಲ್ವರ ಮೃತದೇಹಗಳು ಪತ್ತೆಯಾಗಿಲ್ಲ. 16 ದಿನಗಳ ಕಾಲ ಶೋಧ ನಡೆಸಿದರೂ ದಿನೇಶ್‌ಕುಮಾರ್ (22), ಕಸ್ತೂರಿ (26), ಪ್ರಿಯದರ್ಶಿನಿ (7) ಮತ್ತು ಕಾರ್ತಿಕಾ (21) ಎಂಬುವವರ ಮೃತದೇಹಗಳು ಪತ್ತೆಯಾಗಿರಲಿಲ್ಲ.
ಮೇ 29 ರಂದು ರಾಜ್ಯದಲ್ಲಿ ಮುಂಗಾರು ಆರಂಭದಲ್ಲಿ ಪ್ರಾರಂಭವಾದರೂ, ಅದು ದುರ್ಬಲವಾಗಿತ್ತು. ಜೂನ್‌ನಲ್ಲಿ 56% ನಷ್ಟು ಮಳೆಯ ಕೊರತೆಗೆ ಕಾರಣವಾಯಿತು. ಆದರೆ ಜುಲೈನ ಕೊನೆಯಿಂದ ಮಳೆ ಆರಂಭವಾಗಿದೆ.
ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ಸ್ಥಿರವಾದ ಮಳೆಯ ಬದಲಿಗೆ, ಅಲ್ಪಾವಧಿಯಲ್ಲಿ ಭಾರಿ ಮಳೆ ಬರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಮತ್ತು ಬೆಳೆಗಳನ್ನು ನಾಶಪಡಿಸುತ್ತದೆ ಎನ್ನುತ್ತಾರೆ.












Click it and Unblock the Notifications