ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಚಿತ್ರ ವಿರುದ್ಧದ ಅರ್ಜಿ ವಜಾ ಮಾಡಿ '1 ಲಕ್ಷ ಪಾವತಿಸಿ' ಎಂದ ಹೈಕೋರ್ಟ್
ತಿರುವನಂತಪುರಂ, ಡಿಸೆಂಬರ್ 21: ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಈ ಅರ್ಜಿಯನ್ನು, "ಕ್ಷುಲ್ಲಕ ಅರ್ಜಿ" ಹಾಗೂ "ರಾಜಕೀಯ ಪ್ರೇರಿತ ಅರ್ಜಿ" ಎಂದು ಕರೆದಿದೆ. ಹಾಗೆಯೇ ಅರ್ಜಿದಾರರ ವಿರುದ್ಧ ಕೋರ್ಟ್‌ನ ಸಮಯ ವ್ಯರ್ಥ ಮಾಡಿದ್ದಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚವಾಗಿ ಪಾವತಿಸಿ ಎಂದು ಹೇಳಿದೆ.
ಇನ್ನು ಈ ಅರ್ಜಿಯನ್ನು ರದ್ದು ಮಾಡಿದ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್, ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಲ್‌ಎಸ್‌ಎ) ಪರವಾಗಿ ವೆಚ್ಚವನ್ನು ಠೇವಣಿ ಮಾಡುವಂತೆ ಅರ್ಜಿದಾರರಾದ ಪೀಟರ್ ಮೈಲಿಪರಂಪಿಲ್‌ಗೆ ಸೂಚನೆ ನೀಡಿದೆ. ಒಂದು ವೇಳೆ ಈ ವೆಚ್ಚವನ್ನು ಠೇವಣಿ ಮಾಡುವಲ್ಲಿ ವಿಫಲವಾದರೆ ಕೆಎಲ್‌ಎಸ್‌ಎ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಈ ರೀತಿಯ ಕ್ಷುಲ್ಲಕ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ ಎಂದು ಜನರಿಗೆ ಮತ್ತು ಸಮಾಜಕ್ಕೆ ತಿಳಿಸಲು ವೆಚ್ಚವನ್ನು ವಿಧಿಸಲಾಗುತ್ತಿದೆ ಎಂದು ಕೂಡಾ ನ್ಯಾಯಾಲಯವು ಹೇಳಿದೆ. ನ್ಯಾಯಾಲಯಗಳಲ್ಲಿ ಸಾವಿರಾರು ಕ್ರಿಮಿನಲ್ ಮೇಲ್ಮನವಿಗಳು, ಜಾಮೀನು ಅರ್ಜಿಗಳು, ಸಿವಿಲ್ ಮೊಕದ್ದಮೆಗಳು ಮತ್ತು ವೈವಾಹಿಕ ಪ್ರಕರಣಗಳು ಬಾಕಿ ಇರುವಾಗ, ಕ್ಷುಲ್ಲಕ ಅರ್ಜಿಗಳು ನ್ಯಾಯಾಲಯದ ಸಮಯವನ್ನೇ ವ್ಯರ್ಥ ಮಾಡುತ್ತದೆ ಎಂದು ಕೂಡಾ ಕೋರ್ಟ್ ಹೇಳಿದೆ.

ಪ್ರಧಾನಿ ಚಿತ್ರವಿದ್ದರೆ ಏನು ತಪ್ಪು ಎಂದು ಪ್ರಶ್ನಿಸಿದ ಕೋರ್ಟ್
ಈ ಹಿಂದೆ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಿದ ಕೇರಳ ಹೈಕೋರ್ಟ್, "ಪ್ರಧಾನಿ ಚಿತ್ರವಿದ್ದರೆ ಏನು ತಪ್ಪು, ದೇಶದ ಪ್ರಧಾನಿಯ ಬಗ್ಗೆ ನಿಮಗೆ ನಾಚಿಕೆಯಾಗುತ್ತಿದೆಯೇ," ಎಂದು ಅರ್ಜಿದಾರರನ್ನು ಪ್ರಶ್ನಿಸಿತ್ತು. ಅರ್ಜಿದಾರರು ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಮೂರ್ತಿ ಕುನ್ಹಿಕೃಷ್ಣನ್, ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹೊಂದಿರುವ ಲಸಿಕೆ ಪ್ರಮಾಣಪತ್ರಗಳು ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಹೇಗೆ ಬೇರೆ ಬೇರೆ ಆಗುತ್ತದೆ ಎಂದು ಸ್ಪಷ್ಟೀಕರಣವನ್ನು ಕೋರಿತ್ತು.
ಅರ್ಜಿದಾರರ ಪರ ವಕೀಲ ಎಂ.ಪೀಟರ್, "ಪ್ರಮಾಣಪತ್ರವು ಖಾಸಗಿ ಸೊತ್ತಾಗಿದೆ, ಅದರಲ್ಲಿ ವೈಯಕ್ತಿಕ ವಿವರಗಳನ್ನು ದಾಖಲಿಸಲಾಗಿದೆ. ಹಾಗಾಗಿ ಅದರಲ್ಲಿ ಯಾರ ಫೋಟೋ ಇದ್ದರೂ ಅದು ವ್ಯಕ್ತಿಯ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುವಂತಿದೆ, ಇದು ಸರಿಯಲ್ಲ. ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಚಿತ್ರ ಸೇರಿಸಿರುವುದು ಸರಿಯಲ್ಲ. ಅದು ವ್ಯಕ್ತಿಯ ವೈಯಕ್ತಿಕ ಸ್ಥಾನ ಮಾನಕ್ಕೆ ಧಕ್ಕೆ ಉಂಟು ಮಾಡುತ್ತದೆ," ಎಂದಿದ್ದರು.
ಆದರೆ ನ್ಯಾಯಾಲಯವು, "ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಹೆಸರಿದ್ದರೆ ಏನು ತೊಂದರೆ? ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯಲ್ಲಿ ನೀವೂ ಕೆಲಸ ಮಾಡುತ್ತಿದ್ದೀರಿ, ಅವರೂ ಪ್ರಧಾನಿಯಾಗಿದ್ದರು. ಹಾಗಾದರೆ ಅವರ ಹೆಸರನ್ನೂ ತೆಗೆದುಹಾಕುವಂತೆ ವಿಶ್ವವಿದ್ಯಾಲಯಕ್ಕೆ ಏಕೆ ಹೇಳಬಾರದು?," ಎಂದು ನ್ಯಾಯಾಲಯವು ಪ್ರಶ್ನೆ ಮಾಡಿದೆ.
ಬೇರೆ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ ನ್ಯಾಯಮೂರ್ತಿಗಳು, "ಅವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆ ಪಡದಿರಬಹುದು, ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಇದೆ," ಎಂದಿದ್ದಾರೆ. "ನಿಮಗೆ (ಅರ್ಜಿದಾರರಿಗೆ) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆ? ಅವರು ಜನರ ಆದೇಶದ ಮೇರೆಗೆ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮಲ್ಲಿ ವಿಭಿನ್ನ ರಾಜಕೀಯ ದೃಷ್ಟಿಕೋನಗಳು ಇರಬಹುದು, ಆದರೆ ಅವರು ಇನ್ನೂ ದೇಶದ ಪ್ರಧಾನಿ ಎಂಬುದನ್ನು ಅಲ್ಲಗಳೆಯುವಂತಿಲ್ಲ," ಎಂದು ನ್ಯಾಯಾಧೀಶರು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications