ಶಬರಿಮಲೆ ತೀರ್ಪು ಸ್ವಾಗತಿಸಿದ ಆಶ್ರಮದ ಮೇಲೆ ದುಷ್ಕರ್ಮಿಗಳಿಂದ ದಾಳಿ
Recommended Video

ತಿರುವನಂತಪುರಂ, ಅಕ್ಟೋಬರ್ 27: ಶಬರಿಮಲೆ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದ ತಿರುವನಂತಪುರದ ಸ್ವಾಮಿ ಸಂದೀಪಾನಂದ ಆಶ್ರಮದ ಮೇಲೆ ಶನಿವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಆಶ್ರಮಕ್ಕೆ ಸೇರಿದ ಸ್ವಾಮಿ ಸಂದೀಪಾನಂದ ಬಾಲಕಿಯರ ಶಾಲೆಯ ಬಳಿ ಇದ್ದ ಎರಡು ಕಾರು ಮತ್ತು ಸ್ಕೂಟರ್ ವೊಂದಕ್ಕೆ ಬೆಂಕಿ ಹಚ್ಚಿದ್ದು, ನಂತರ ಆಶ್ರಮದ ಮೇಲೂ ದಾಳಿ ನಡೆದಿದೆ. ಘಟನೆ ಶನಿವಾರ ಬೆಳಗ್ಗಿನ ಜಾವ ಸುಮಾರು 2.30 ರ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಶ್ರಮಕ್ಕೆ ತೆರಳಿ, ಘಟನೆಯನ್ನು ಖಂಡಿಸಿದ್ದಾರೆ.

ದಾಳಿ ಖಂಡಿಸಿದ ಪಿಣರಾಯಿ ವಿಜಯನ್
'ಸೈದ್ಧಾಂತಿಕವಾಗಿ ಒಂದು ವಿಷಯವನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗದವರು ಈ ರೀತಿ ದೈಹಿಕ ಹಲ್ಲೆ ನಡೆಸುತ್ತಾರೆ. ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಯಾರಲ್ಲಿ ಸಹಿಷ್ಣು ಬುದ್ಧಿ ಇಲ್ಲವೋ ಅವರು ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ' ಎಂದು ವಿಜಯನ್ ಹೇಳಿದರು.

ಐತಿಹಾಸಿಕ ತೀರ್ಪು
ಕಳೆದ 800 ವರ್ಷಗಳಿಂದ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಹೆಣ್ಣು ಮಕ್ಕಳು ಋತುಮತಿಯಾಗುವ ಕಾರಣ ಅವರು ದೇವಾಲಯ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನಲಾಗಿತ್ತು. ಆದರೆ ಸೆ.28 ರಂದು ಈ ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿತ್ತು.

ತೀರ್ಪನ್ನು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ
ಸುಪ್ರೀಂ ತೀರ್ಪನ್ನು ಬಹುತೇಕ ಹಿಂದು ಸಂಘತನೆಗಳು, ಆಶ್ರಮಗಳು ವಿರೋಧಿಸಿದ್ದರೆ, ಸ್ವಾಮಿ ಸಂದೀಪಾನಂದ ಅವರು ತೀರ್ಪನ್ನು ಸ್ವಾಗತಿಸಿದ್ದರು. ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದಿದ್ದರು. ಇಂದು ಆಶ್ರಮದ ಮೇಲೆ ದಾಳಿ ನಡೆಯುವುದಕ್ಕೂ ಅವರ ಈ ಹೇಳಿಕೆಯೇ ಕಾರಣ ಎನ್ನಲಾಗಿದೆ.

ನ 13 ರಂದು ಮೇಲ್ಮನವಿ ವಿಚಾರಣೆ
ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಆಯ್ಯಪ್ಪ ದೇವಾಲಯದ ಆಡಳಿತ ಮಂಡಳಿ, ಅಯ್ಯಪ್ಪ ಭಕ್ತರ ಸಂಘಟನೆ ಸೇರಿದಮತೆ ವಿವಿಧ ಸಂಘಟನೆಗಳು ಸುಮಾರು 19 ಅರ್ಜಿಗಳನ್ನು ಸಲ್ಲಿಸಿವೆ. ಮೇಲ್ಮನವಿಯ ವಿಚಾರಣೆಯನ್ನು ನವೆಂಬರ್ 13 ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.












Click it and Unblock the Notifications