ಜೂನ್ 5 ರ ನಂತರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ
ಶ್ರೀನಗರ, ಮಾರ್ಚ್ 16: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆ ಜೂನ್ 05 ರ ನಂತರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ಮುಗಿದ ಮೇಲೆ ಮತ್ತು ಅಮರನಾಥ ಯಾತ್ರೆ ಆರಂಭವಾಗುವ ಮುನ್ನ ಚುನಾವಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಂಜಾನ್ ತಿಂಗಳು ಮೇ 5 ರಿಂದ ಆರಂಭವಾಗಲಿದ್ದು, ಜೂನ್ 4 ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಜೂನ್ 5 ರ ನಂತರ ಯಾವುದೇ ದಿನ ಚುನಾವಣೆ ನಡೆಯಬಹುದಾಗಿದ್ದು, 6 ರಿಂದ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 5 ರಿಂದ 30 ರ ಒಳಗೆ ಚುನಾವಣೆ ಮುಗಿಯಬಹುದು ಎನ್ನಲಾಗಿದೆ.

ಅಮರನಾಥ ಯಾತ್ರೆ ಜುಲೈ 1 ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಫಲಿತಾಂಶ ಹೊರಬೀಳಬೇಕಿದೆ.
ಈಗಾಗಲೇ ಜಮ್ಮು ಕಾಶ್ಮೀರದ ಸರ್ವಪಕ್ಷಗಳ ಮುಖಂಡರು ಜಮ್ಮು-ಕಾಶ್ಮೀರಕ್ಕೆ ಚುನಾವಣಾ ಆಯೋಗ ನೇಮಿಸಿರುವ ಮೇಲ್ವಿಚಾರಕರನ್ನು ಭೇಟಿಯಾಗಿ, ಲೋಕಸಭಾ ಚುನಾವಣೆಯ ಜೊತೆ ಜೊತೆಗೆ ಜಮ್ಮು-ಕಾಶ್ಮೀರ ಚುನಾವಣೆಯನ್ನೂ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
2018 ರ ಜೂನ್ 19 ರಂದು ಜಮ್ಮು ಕಾಶ್ಮೀರದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದ ಕಾರಣ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. ರಾಜ್ಯಪಾಲರ ಆಳ್ವಿಕೆ ಮುಗಿದು, ಡಿಸೆಂಬರ್ 19 ರಿಂದ ರಾಷ್ಟ್ರಪತಿಗಳ ಆಳ್ವಿಕೆ ಜಾರಿಯಲ್ಲಿದೆ.
ಮಾರ್ಚ್ 11 ರಂದು ಲೋಕಸಭಾ ಚುನಾವಣೆ ಘೋಷಣೆಯಾದ ದಿನವೇ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ವಿಧಾನಸಭೆಗಳಿಗೂ ಚುನಾವಣಾ ದಿನಾಂಕ ಘೋಷಣೆಯಾಗಿತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಪ್ರತ್ಯೇಕ ಸಮಯದಲ್ಲಿ ಚುನಾವಣೆ ನಡೆಸಲು ಚಿಂತಿಸಲಾಗಿತ್ತು.












Click it and Unblock the Notifications