ಐವರು ಭಾರತೀಯ ಯೋಧರನ್ನು ಕೊಂದೆ ಎಂದ ಪಾಕ್, ಭಾರತದಿಂದ ಛೀಮಾರಿ
ಶ್ರೀನಗರ, ಆಗಸ್ಟ್ 16: ಗಡಿ ನಿಯಂತ್ರಣ ರೇಖೆ ಬಳಿ ಐವರು ಭಾರತೀಯ ಯೋಧರನ್ನು ಕೊಂದಿದ್ದೇವೆ ಎಂದು ಪಾಕ್ ಸೇನಾ ವಕ್ತಾರ ನೀಡಿದ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.
"ಭಾರತೀಯ ಸೇನೆ ಗಡಿನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿ ಆರಂಭಿಸಿತ್ತು. ಜಮ್ಮು ಮತ್ತು ಕಾಶ್ಮೀರದ ವಿಷಯದಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತ ಈ ಪ್ರಯತ್ನ ನಡೆಸಿತ್ತು. ಆದರೆ ಈ ದಾಳಿಯಲ್ಲಿ ಐವರು ಭಾರತೀಯ ಯೋಧರನ್ನು ಕೊಲ್ಲುವಲ್ಲಿ ಪಾಕ್ ಸೇನೆ ಯಶಸ್ವಿಯಾಗಿದೆ" ಎಂದು ಪಾಕಿಸ್ತಾನಿ ಸೇನಾ ವಕ್ತಾರ ಮೇ.ಜ. ಆಸಿಫ್ ಘಾಫೂರ್ ಟ್ವೀಟ್ ಮಾಡಿದ್ದರು.
"ಈ ದಾಳಿಯಲ್ಲಿ ಹಲವು ಬಂಕರ್ಸ್ ಗಳನ್ನು ನಾಶಪಡಿಸಲಾಗಿದೆ, ಗುಂಡಿನ ದಾಳಿ ಈಗಲೂ ಮುಂದಿವರಿದಿದೆ" ಎಂದು ಅವರು ಹೇಳಿದ್ದರು.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಸೇನಾ ವಕ್ತಾರ ಕರ್ನಲ್ ಅಮಾನ್ ಆನಂದ್, "ಪಾಕಿಸ್ತಾನ ಕಾಲ್ಪನಿಕ ಲೋಕದಲ್ಲಿದೆ. ಪಾಕಿಸ್ತಾನದ ಹೇಳಿಕೆ ಆಧಾರ ರಹಿತ. ಈ ಹೇಳಿಕೆಯನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕಿದ್ದೇವೆ" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಭಾರತ ಸರ್ಕಾರದ ನಡೆಯಿಂದ ಭಾರೀ ಆಘಾತ ಎದುರಿಸಿರುವ ಪಾಕಿಸ್ತಾನ ಈಗಾಗಲೇ ಗಡಿಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ.
ಜೊತೆಗೆ ಭಾರತವೂ ಗಡಿಯಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ತಲೆದೋರಿದೆ.












Click it and Unblock the Notifications