ಭಾರಿ ಮಳೆಯಿಂದ ಭೂಕುಸಿತ ಅಮರನಾಥ ಯಾತ್ರೆ ಮತ್ತೆ ಸ್ಥಗಿತ, ಹಲವೆಡೆ ಪ್ರವಾಹ
ಶ್ರೀನಗರ, ಜುಲೈ 29: ನಿರಂತರ ಮಳೆಯಿಂದಾಗಿ 270 ಕಿ.ಮೀ. ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಾಂಬನ್‌ನಲ್ಲಿ ಭೂಕುಸಿತ, ಕಲ್ಲುಗಳು ರಸ್ತೆ ಮೇಲೆ ಉರುಳಿದ್ದರಿಂದ ವಾರ್ಷಿಕ ಅಮರನಾಥ ಯಾತ್ರೆಗೆ ತಾತ್ಕಾಲಿಕ ತಡೆ ನೀಡಲಾಯಿತು.
ಸಂಚಾರ, ರಾಷ್ಟ್ರೀಯ ಹೆದ್ದಾರಿ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಶಬೀರ್ ಮಲಿಕ್ ಈ ಬಗ್ಗೆ ಮಾಹಿತಿ ನೀಡಿ, "ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮೆಹರ್ ಮತ್ತು ಕೆಫೆಟೇರಿಯಾ ಮೋರ್ಹ್‌ನಲ್ಲಿ ನಿರ್ಬಂಧಿಸಲಾಗಿದೆ. ನಾವು ಸಾಧ್ಯವಾದಷ್ಟು ಬೇಗ ತೆರವುಕಾರ್ಯ ಪೂರ್ಣಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಡುತ್ತೇವೆ. ಪವಿತ್ರ ಅಮರನಾಥಕ್ಕೆ ಭೇಟಿ ನೀಡಲು ಜಮ್ಮುವಿನಿಂದ ಬಂದಿದ್ದ ಅಮರನಾಥ ಯಾತ್ರಾರ್ಥಿಗಳನ್ನು ರಾಂಬನ್‌ನ ಚಂದರ್‌ಕೋಟೆಯಲ್ಲಿರುವ ಯಾತ್ರಿ ನಿವಾಸಕ್ಕೆ ಕರೆದೊಯ್ಯಲಾಗಿದೆ." ಎಂದು ತಿಳಿಸಿದರು.
ಗುರುವಾರ ಬೆಳಿಗ್ಗೆ, 1,602 ಯಾತ್ರಾರ್ಥಿಗಳಿದ್ದ 28 ನೇ ಬ್ಯಾಚ್ ಜಮ್ಮುವಿನಿಂದ ದಕ್ಷಿಣ ಕಾಶ್ಮೀರ ಹಿಮಾಲಯದ ಅಮರನಾಥನ ದೇಗುಲಕ್ಕೆ ತೆರಳಿತು. ಅವರು ಭಗವತಿ ನಗರ ಯಾತ್ರಿ ನಿವಾಸದಿಂದ 55 ವಾಹನಗಳ ಬೆಂಗಾವಲು ಪಡೆಯ ಜೊತೆ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಕಳೆದ ಮೂರು ದಿನಗಳಿಂದ ಗುಹಾ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.

2.33 ಲಕ್ಷ ಯಾತ್ರಾರ್ಥಿಗಳಿಂದ ಅಮರನಾಥನ ದರ್ಶನ
ಇದುವರೆಗೂ, 2.33 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ನೈಸರ್ಗಿಕವಾಗಿ ಹಿಮದಲ್ಲಿ ರೂಪುಗೊಂಡ ಶಿವಲಿಂಗದ ದರ್ಶಣ ಪಡೆದಿದ್ದಾರೆ. ವಾರ್ಷಿಕ ಅಮರನಾಥ ಯಾತ್ರೆಯು ಆಗಸ್ಟ್ 11 ರಂದು ಕೊನೆಗೊಳ್ಳಲಿದೆ.
ಇದುವರೆಗೆ 51 ಯಾತ್ರಿಕರು ಅಮರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಕೂಲ ಹವಾಮಾನದ ನಡುವೆ, ಜಮ್ಮು, ಶ್ರೀನಗರ, ರಾಂಬನ್ ಮತ್ತು ಜಮ್ಮುವಿನ ಟ್ರಾಫಿಕ್ ಕಂಟ್ರೋಲ್ ಘಟಕಗಳಿಂದ ಸೂಚನೆ ನೀಡದ ಹೊರತು ಜನರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ.

ತುಂಬಿ ಹರಿಯುತ್ತಿರುವ ಹಳ್ಳ, ನದಿಗಳು
ನದಿಗಳು ಮತ್ತು ಹಳ್ಳಕೊಳ್ಳಗಳ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಜನರು ಜಲಮೂಲಗಳಿಂದ ದೂರವಿರಲು ಸಲಹೆ ನೀಡಲಾಗಿದೆ. ಚೆನಾಬ್, ತಾವಿ, ಉಜ್ ಮತ್ತು ಬಸಂತರ್ ಸೇರಿದಂತೆ ಹೆಚ್ಚಿನ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ.
"ಎತ್ತರದ ಪ್ರದೇಶದಲ್ಲಿ ಬೀಳುವ ಮಳೆಯು ಪ್ರವಾಹಗಳು, ಮಣ್ಣಿನ ಕುಸಿತಗಳು, ದುರ್ಬಲ ಸ್ಥಳಗಳಲ್ಲಿ ಭೂಕುಸಿತಗಳಿಗೆ ಕಾರಣವಾಗಬಹುದು. ಈ ಘಟನೆಗಳು ಆಗಾಗ್ಗೆ ಇದ್ದಕ್ಕಿದ್ದಂತೆ ಸಂಭವಿಸುವುದರಿಂದ ಜನರು ಎಚ್ಚರವಾಗಿರಬೇಕು" ಎಂದು ಹವಾಮಾನ ಇಲಾಖೆಯ ಸಲಹೆಗಾರರೊಬ್ಬರು ಹೇಳಿದರು.

ಭಾರಿ ಮಳೆಯಿಂದ ಪ್ರವಾಹ, ಭೂಕುಸಿತ
ಭಾರಿ ಮಳೆಯಿಂದಾಗಿ ಹತ್ತಾರು ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ, ಕೆಲವು ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಜಮ್ಮು ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹಲವಾರು ವಾಹನಗಳು ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿವೆ.
ಕೆಲವೇ ಗಂಟೆಗಳಲ್ಲಿ 80 ಮಿ.ಮೀ.ಗೂ ಅಧಿಕ ಮಳೆ ಸುರಿದ ಕಾರಣ ಜಮ್ಮು ನಗರದ ಬಹುತೇಕ ರಸ್ತೆಗಳು ಮತ್ತು ಕಾಲೋನಿಗಳು ಜಲಾವೃತಗೊಂಡಿವೆ. ಜಮ್ಮು, ಕಥುವಾ, ಪೂಂಚ್, ರಜೌರಿ, ಉದಂಪುರ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ವರದಿಯಾಗಿದೆ. ಕಥುವಾದಲ್ಲಿ ಹತ್ತಾರು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ. ಕಿಶ್ತ್ವಾರ್‌ನಲ್ಲಿ, ಅಫ್ತಿ ಪ್ರದೇಶದಲ್ಲಿ ಸೇತುವೆ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ಹಾನಿ, ಶಾಲೆಯಲ್ಲೇ ಸಿಲುಕಿದ ವಿದ್ಯಾರ್ಥಿಗಳು
ಮುತ್ತಿ-ಉದಯ್‌ವಾಲಾ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸರ್ಕಾರಿ ಶಾಲೆಯಲ್ಲಿ ಸಿಲುಕಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ನಂತರ, ಜಮ್ಮುವಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು.
ಜಮ್ಮು ಜಿಲ್ಲೆಯ ಅರ್ನಿಯಾ ಪ್ರದೇಶದಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮ್ಮು ನಗರದ ಕನಕ್ ಮಂಡಿ ಪ್ರದೇಶದಲ್ಲಿ ಮೂರು ಅಂತಸ್ತಿನ ಮನೆಯೂ ಕುಸಿದಿದೆ. ಕಲ್ಕಾ ಕಾಲೋನಿಯಲ್ಲಿಯೂ ಮನೆಯೊಂದರ ಗೋಡೆ ಕುಸಿದಿದೆ.
ಮಳೆ ಮತ್ತು ನಂತರದ ಹಠಾತ್ ಪ್ರವಾಹದಿಂದಾಗಿ ಜಮ್ಮುವಿನಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳೆಂದರೆ ಕೇರಾನ್, ಲೋವರ್ ರೂಪ್‌ನಗರ, ಕಂಗ್ರೈಲ್, ರಾಯ್‌ಪುರ್, ಕೋಟ್-ಭಲ್ವಾಲ್, ಬರ್ನ್ ಮತ್ತು ಘರೋಟಾ, ಪಲೂರಾ, ತಾಲಾಬ್ ಟಿಲ್ಲೋ, ಚನ್ನಿ ಹಿಮ್ಮತ್ ಮತ್ತು ಇತರ ತಗ್ಗು ಪ್ರದೇಶಗಳು.
ನಗರದ ಕೆಲವು ಭಾಗಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಸ್ಥಗಿತವಾಗಿದೆ, ಹಳೆ ಜನಿಪುರ, ಭವಾನಿ ನಗರ, ನಸೀಬ್ ನಗರ, ಶಾಂತ ನಗರ, ಪಾಲೂರ, ಲೋವರ್ ರೂಪ್ ನಗರ, ಮುತ್ತಿಯಲ್ಲಿ ಮನೆ ಮತ್ತು ಅಂಗಡಿಗಳಿಗೆ ನೀರು ಮತ್ತು ಮಣ್ಣು ನುಗ್ಗಿದೆ.
ರಿಯಾಸಿ ಜಿಲ್ಲೆಯಲ್ಲಿ, ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಹೊಸ ಮಾರ್ಗವನ್ನು ಗುರುವಾರ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications