ಪೈಲಟ್ ಅಭಿನಂದನ್ ಬಂಧನಕ್ಕೆ ಕಾರಣನಾಗಿದ್ದ ಪಾಕಿಸ್ತಾನದ ಕಮಾಂಡೊ ಹತ್ಯೆ
ಶ್ರೀನಗರ, ಆಗಸ್ಟ್ 20: ಪೈಲಟ್ ಅಭಿನಂದನ್ ಬಂಧನಕ್ಕೆ ಕಾರಣನಾಗಿದ್ದ ಪಾಕಿಸ್ತಾನದ ಕಮಾಂಡೊವನ್ನು ಭಾರತೀಯ ಸೈನಿಕರು ಗಡಿ ನಿಯಂತ್ರಣ ರೇಖೆ ಬಳಿ ಹತ್ಯೆ ಮಾಡಿದ್ದಾರೆ.
ಭಾರತೀಯ ಪಡೆ ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಗುಂಡೇಟಿಗೆ ಪಾಕಿಸ್ತಾನದ ಕಮಾಂಡೋ ಬಲಿಯಾಗಿದ್ದಾನೆ. ಈತ ಅಭಿನಂದನ್ ಬಂಧನದ ಹಿಂದಿದ್ದ ವ್ಯಕ್ತಿಯಾಗಿದ್ದಾನೆ.
ಪಾಕ್ ಸೇನೆಯ ಸ್ಪೆಷಲ್ ಸರ್ವೀಸ್ ಗ್ರೂಪ್ನಲ್ಲಿ ನಾಯಬ್ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಹಮದ್ ಖಾನ್ ಆಗಸ್ಟ್ 17 ರಂದು ಉಗ್ರರು ಭಾರತದ ಗಡಿಯೊಳಗೆ ನುಸುಳಲು ನಕ್ಯಾಲ್ ಸೆಕ್ಟರ್ನ ಗಡಿನಿಯಂತ್ರಣ ರೇಖೆ ಬಳಿ ನೆರವು ನೀಡುತ್ತಿದ್ದ. ಈ ವೇಳೆ ಭಾರತೀಯ ಸೈನಿಕರು ಆತನನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.

ಫೆಬ್ರವರಿ 27 ರಂದು ಭಾರತೀಯ ವಾಯುಪಡೆಯ ಯುದ್ಧವಿಮಾನ ಮತ್ತು ಪಾಕ್ ಸೇನೆಯ ಯುದ್ಧ ವಿಮಾನಗಳ ನಡುವೆ ನಡೆದಿದ್ದ ಕದನದಲ್ಲಿ ಅಭಿನಂದನ್ ವರ್ಧಮಾನ್ ಪಾಕ್ ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಪಾಕಿಸ್ತಾನ ಪ್ರವೇಶಿಸಿದ್ದರು. ಆಗ ಪಾಕ್ ಸೇನೆಯ ಗುಂಡೇಟು ತಗುಲಿ ಅಭಿನಂದನ್ ಯುದ್ಧ ವಿಮಾನ ಪತನವಾಗಿತ್ತು.
ಪಾಕ್ ಸೇನೆ ಅವರನ್ನು ಬಂಧಿಸಿತ್ತು. ಅವರನ್ನು ಬಂಧಿಸಿದ ಫೋಟೋಗಳನ್ನು ಆ ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಫೋಟೋಗಳಲ್ಲಿ ಅಹಮದ್ ಖಾನ್ ಅಭಿನಂದನ್ರನ್ನು ಹಿಡಿದು ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಭಿನಂದನ್ರನ್ನು 2 ದಿನಗಳ ಬಳಿಕ ಪಾಕಿಸ್ತಾನ ಬಿಡುಗಡೆ ಮಾಡಿತ್ತು.
ಪಾಕಿಸ್ತಾನದ ಸೇನೆಯ ವಿಶೇಷ ಸೇವಾ ಗುಂಪಿನಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಹ್ಮದ್ ಖಾನ್ ಅತಿಕ್ರಮಣಕಾರರಿಗೆ ಸಹಕರಿಸುತ್ತಿದ್ದಾಗ ನಕ್ಯಾಲ್ ಸೆಕ್ಟರ್ ನಲ್ಲಿ ಭಾರತೀಯ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ.
ಅಹ್ಮದ್ ಖಾನ್ ನೌಶೆರಾ ಸುಂದರ್ ಬಾನಿ ಹಾಗೂ ಪಲ್ಲಾನ್ ವಾಲಾ ಸೆಕ್ಟರ್ ಗಳಲ್ಲಿ ಭಾರತದೊಳಗೆ ಅತಿಕ್ರಮಣ ಮಾಡುವವರಿಗೆ ಸಹಕರಿಸುತ್ತಿದ್ದ ಮಾಹಿತಿ ಸೇನಾ ಮೂಲಗಳಿಂದ ತಿಳಿದುಬಂದಿದೆ.
ಉತ್ತಮ ತರಬೇತಿ ಪಡೆದಿದ್ದ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯವರಿಗೆ ಭಾರತದೊಳಗೆ ನುಸುಳಲು ಅಹ್ಮದ್ ಖಾನ್ ಸಹಕರಿಸುತ್ತಿದ್ದ. ಭಾರತೀಯ ಸೈನಿಕರ ಗುಂಡೇಟಿಗೆ ಬಲಿಯಾಗಿರುವ ಅಹಮದ್ ಖಾನ್ ನೌಷಾರಾ, ಸುಂದರ್ಬನಿ ಮತ್ತು ಪಲ್ಲನ್ ವಾಲಾ ಸೆಕ್ಟರ್ಗಳಲ್ಲಿ ಉಗ್ರರು ಭಾರತದೊಳಗೆ ನುಸುಳಲು ನೆರವು ನೀಡುತ್ತಿದ್ದ. ಈಗ ಆ.17ರಂದು ಜೈಷ್ ಎ ಮೊಹಮ್ಮದ್ ಉಗ್ರಸಂಘಟನೆಯ ಉಗ್ರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.











Click it and Unblock the Notifications