T20 Cricket: 20 ಓವರ್‌ಗಳಲ್ಲಿ 344 ರನ್; ಹೊಸ ದಾಖಲೆ ಬರೆದ ಜಿಂಬಾಬ್ವೆ
ಐಸಿಸಿ ಟಿ20 ವಿಶ್ವಕಪ್ ಆಫ್ರಿಕಾ ಕ್ವಾಲಿಫೈಯರ್ ಗ್ರೂಪ್ ಬಿ ಪಂದ್ಯದಲ್ಲಿ ಜಿಂಬಾಬ್ವೆ ಇತಿಹಾಸ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈಗ ಜಿಂಬಾಬ್ವೆ ತಂಡದ್ದಾಗಿದೆ. ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಗಳಿಸಿದ್ದು ಹೊಸ ದಾಖಲೆ ಬರೆದಿದೆ. ಈ ಹಿಂದೆ ನೇಪಾಳ ಮಾಡಿದ್ದ 314 ರನ್‌ಗಳ ದಾಖಲೆಯನ್ನು ಮುರಿದಿದೆ.
ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಜಿಂಬಾಬ್ವೆ ಬ್ಯಾಟರ್ ಗಳು ಗ್ಯಾಂಬಿಯಾ ವಿರುದ್ಧ ಅಬ್ಬರಿಸಿದರು. ಗ್ಯಾಂಬಿಯಾದ ಮುಸಾ ಜೋಬರ್ತೆ 4 ಓವರ್ ಗಳಲ್ಲಿ 93 ರನ್ ಬಿಟ್ಟುಕೊಟ್ಟು ಕೆಟ್ಟ ದಾಖಲೆ ಮಾಡಿದರು. ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝಾ 43 ಎಸೆತಗಳಲ್ಲಿ ಅಜೇಯ 133 ರನ್ ಗಳಿಸಿ ಮಿಂಚಿದರು.

ಬ್ರಿಯಾನ್ ಬೆನ್ನೆಟ್ 26 ಎಸೆತಗಳಲ್ಲಿ 50 ರನ್ ಗಳಿಸಿದರೆ, ಟಿ ಮರುಮನಿ 19 ಎಸೆತಗಳಲ್ಲಿ 62 ರನ್ ಗಳಿಸಿದರು. ಸಿಕಂದರ್ ರಾಜಾ 43 ಎಸೆತಗಳಲ್ಲಿ 7 ಬೌಂಡರಿ 15 ಸಿಕ್ಸರ್ ಸಹಿತ 133 ರನ್ ಗಳಿಸಿದರು. ಕ್ಲೈವ್ ಮಾದಂಡೆ 17 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿದರು. ಅಂತಿಮವಾಗಿ ಜಿಂಬಾಬ್ಬೆ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಗಳಿಸಿ ದಾಖಲೆ ಮಾಡಿತು.
54 ರನ್‌ಗಳಿಗೆ ಗ್ಯಾಂಬಿಯಾ ಆಲೌಟ್
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಯಾಂಬಿಯಾ ಕೇವಲ 54 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. 10 ಆಟಗಾರರು ಒಂದಂಕಿ ರನ್ ಗಳಿಸಿದರೆ, ಆಂಡ್ರೆ ಜಾರ್ಜು 12 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ರಿಚರ್ಡ್ ಎನ್‌ಗರವ ಮತ್ತು ಬ್ರಾಂಡನ್ ಮವುತ ತಲಾ 3 ವಿಕೆಟ್ ಪಡೆದರು. ಈ ಮೂಲಕ ಜಿಂಬಾಬ್ವೆ 290 ರನ್‌ಗಳ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಜಿಂಬಾಬ್ವೆ 344 ರನ್ ಗಳಿಸುವ ಮೂಲಕ 314 ರನ್ ಗಳಿಸಿದ್ದ ನೇಪಾಳ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ ವಿರುದ್ಧ 397 ರನ್ ಗಳಿಸಿದ್ದ ಭಾರತ ಅತ್ಯಧಿಕ ಮೊತ್ತದ ಪಟ್ಟಿಯಲ್ಲಿ ಇದೀಗ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಟಿ20 ಇನ್ನಿಂಗ್ಸ್‌ನಲ್ಲಿ 27 ಸಿಕ್ಸರ್ ಬಾರಿಸಿದ್ದು, ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಎನ್ನುವ ದಾಖಲೆ ಬರೆದಿದೆ. 30 ಬೌಂಡರಿಗಳು ದಾಖಲಾಗಿದ್ದು ಜಂಟಿ ದಾಖಲೆ ಮಾಡಿದೆ. 33 ಎಸೆತಗಳಲ್ಲಿ ಸಿಕಂದರ್ ರಾಜಾ ಶತಕ ಬಾರಿಸಿದ್ದು ಜಂಟಿ ವೇಗದ ಟಿ20 ಶತಕ ಎನಿಸಿಕೊಂಡಿದೆ.












Click it and Unblock the Notifications