India vs Australia T20: ಪಾಕಿಸ್ತಾನದ ದಾಖಲೆ ಮುರಿದು ಹೊಸ ದಾಖಲೆ ಬರೆದ ಭಾರತ
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಪಾಕಿಸ್ತಾನದ ದಾಖಲೆಯನ್ನು ಮುರಿದಿರುವ ಭಾರತ ಹೊಸ ದಾಖಲೆ ಬರೆದಿದೆ. ಪಾಕಿಸ್ತಾನ ಈವರೆಗೂ 226 ಪಂದ್ಯಗಳನ್ನು ಆಡಿದ್ದು 135 ಪಂದ್ಯಗಳನ್ನು ಗೆದ್ದಿದೆ, ಭಾರತ 214 ಪಂದ್ಯಗಳನ್ನಾಡಿದ್ದು 136 ಗೆಲುವು ಪಡೆದು ಪಾಕಿಸ್ತಾನದ ದಾಖಲೆಯನ್ನು ಮುರಿದಿದೆ. ನ್ಯೂಜಿಲೆಂಡ್ 200 ಪಂದ್ಯಗಳಲ್ಲಿ 102 ಗೆಲುವಿನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

2006 ರಲ್ಲಿ ಟಿ20 ಕ್ರಿಕೆಟ್ ಆರಂಭವಾಯಿತು, ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ಟಿ20 ಭಾರತ ಟಿ20 ಪಂದ್ಯವನ್ನು ಆಡಿತು. ಈ 17 ವರ್ಷಗಳಲ್ಲಿ ಒಟ್ಟು 13 ನಾಯಕರು ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ಗೆಲುವಿನ ಶೇಕಡಾವಾರು (76.47) ವಿಷಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದರೆ, ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2007 ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ ತಮ್ಮ ಅಧಿಕಾರಾವಧಿಯಲ್ಲಿ ಭಾರತವನ್ನು 50 ಪಂದ್ಯಗಳಲ್ಲಿ 30 ಗೆಲುವಿನತ್ತ ಮುನ್ನಡೆಸಿದ್ದರು.
ಸೂರ್ಯಕುಮಾರ್ ಯಾದವ್ ಅವರು ಇಲ್ಲಿಯವರೆಗೆ ಕೇವಲ ನಾಲ್ಕು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ಮೂರು ಪಂದ್ಯದಲ್ಲಿ ಗೆಲುವು ಕಂಡಿದ್ದಾರೆ. ಮೊದಲ ಅವಕಾಶದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಸಂಭ್ರಮಿಸಿದ್ದಾರೆ.
ಸರಣಿ ಗೆದ್ದ ಭಾರತದ ಯುವಪಡೆ
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-1 ಮುನ್ನಡೆ ಪಡೆದುಕೊಂಡಿದ್ದು ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ರಿಂಕು ಸಿಂಗ್, ಜಿತೇಶ್ ಶರ್ಮಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ 20 ರನ್‌ಗಳಿಂದ ಸೋಲನುಭವಿಸಿದೆ. ಸರಣಿಯ ಕೊನೆಯ ಪಂದ್ಯ ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications