WPL 2026: ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿದ ನ್ಯಾಟ್ ಸಿವರ್-ಬ್ರಂಟ್
WPL 2026: ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ ಕೊನೆಗೂ ಮೊದಲ ಶತಕ ದಾಖಲಾಗಿದೆ. ನಾಲ್ಕನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಈ ಅಪರೂಪದ ಸಾಧನೆ ಮಾಡಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಬ್ಲ್ಯೂಪಿಎಲ್ ಆರಂಭ ಆದಾಗಿನಿಂದಲೂ ಹಲವು ಆಟಗಾರ್ತಿಯರು ಶತಕ ಹತ್ತಿರ ಬಂದು ಕೈ ತಪ್ಪುತ್ತಲೇ ಇತ್ತು. ಹೀಗಾಗಿ ಮೊದಲ ಶತಕಕ್ಕಾಗಿ ಇಷ್ಟು ದಿನ ಕಾಯಬೇಕಾಯಿತು. ಇದೀಗ ಆ ನಿರೀಕ್ಷೆಗೆ ನ್ಯಾಟ್ ಸಿವರ್-ಬ್ರಂಟ್ ತೆರೆ ಎಳೆದಿದ್ದಾರೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಅತ್ಯಂತ ಮಹತ್ವದ ಪಂದ್ಯದಲ್ಲಿ ಅವರು ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸಿ ಡಬ್ಲ್ಯೂಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭದಲ್ಲೇ ಸಜೀವನ್ ಸಜನಾ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ, ಬಳಿಕ ನ್ಯಾಟ್ ಸಿವರ್-ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟವಾಡಿ ತಂಡವನ್ನು ಮುನ್ನಡೆಸಿದರು. ನ್ಯಾಟ್ ಸಿವರ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಇವರಿಬ್ಬರ ನಡುವೆ 131 ರನ್‌ಗಳ ಭರ್ಜರಿ ಜೊತೆಯಾಟ ಮೂಡಿಬಂತು.
ಶತಕ ಸಿಡಿಸಿದ ಬ್ರಂಟ್: ಹೇಲಿ ಮ್ಯಾಥ್ಯೂಸ್ ವಿಕೆಟ್ ಒಪ್ಪಿಸಿದ ಬಳಿಕವೂ ಬ್ರಂಟ್ ತಮ್ಮ ಬ್ಯಾಟಿಂಗ್ ದಾಳಿಯನ್ನು ಮುಂದುವರೆಸಿ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದ ಅವರು, 20ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಂಗಲ್ ಮೂಲಕ ಶತಕ ಪೂರ್ಣಗೊಳಿಸಿದರು. 57 ಎಸೆತಗಳಲ್ಲಿ 100 ರನ್‌ಗಳೊಂದಿಗೆ ಅಜೇಯರಾಗಿ ಉಳಿದ ಬ್ರಂಟ್ ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ.
ನ್ಯಾಟ್ ಸಿವರ್-ಬ್ರಂಟ್ ಅವರ ಈ ಅದ್ಭುತ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 200 ರನ್‌ಗಳ ಬೃಹತ್ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೀಡಿತು. ಇನ್ನೂ ನ್ಯಾಟ್ ಸಿವರ್-ಬ್ರಂಟ್ ಸಿಡಿಸಿದ ಶತಕವು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಸದಾ ನೆನಪಾಗುವ ಸಾಧನೆಯಾಗಿ ಉಳಿಯಲಿದೆ.
ಶತಕ ತಪ್ಪಿಸಿಕೊಂಡವರ ವಿವರ: ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಶತಕದ ಕನಸು ಹಲವು ಬಾರಿ ಕೈ ತಪ್ಪಿತ್ತು. ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸೋಫಿ ಡಿವೈನ್ 95 ರನ್‌ಗಳವರೆಗೆ ತಲುಪಿದರೂ ಶತಕ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಅದೇ ರೀತಿ, ಭಾರತದ ಸ್ಟಾರ್ ಬ್ಯಾಟರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಸಗ 96 ರನ್ ಸಿಡಿಸಿ ಶತಕದ ಅಂಚಿನಲ್ಲಿ ಎಡವಿದ್ದರು.
ಹೀಗಾಗಿ ಸ್ಮೃತಿ ಮಂದಾನ ಅವರು ಗಳಿಸಿದ್ದ 96 ರನ್‌ಗಳೇ ಈವರೆಗೆ ಡಬ್ಲ್ಯೂಪಿಎಲ್ ಇತಿಹಾಸದಲ್ಲಿನ ಅತ್ಯಧಿಕ ವೈಯಕ್ತಿಕ ರನ್‌ಗಳಾ ಆಗಿ ದಾಖಲಾಗಿತ್ತು. ಆದರೆ, ಈ ದಾಖಲೆಗೂ ಈಗ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸಿವರ್-ಬ್ರಂಟ್ ಅವರು, ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡದ ವಿರುದ್ಧವೇ ಶತಕ ಬಾರಿಸಿ ಆ ದಾಖಲೆಯನ್ನು ಮುರಿದರು. ಇದು ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಕ್ಷಣವಾಗಿದೆ ಎಂದು ಹೇಳಬಹುದು.
ಆರ್‌ಸಿಬಿಗೆ ಸೋಲು: ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ನಿಗದಿ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್‌ಗಳನ್ನು ಕಲೆಹಾಕಿ 200 ರನ್‌ಗಳ ಬೃಹತ್ ಗುರಿ ನೀಡಿದ್ದು, ಇದನ್ನು ತಲುಪಲು ಆರ್‌ಸಿಬಿ ವಿಫಲವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿ ಸೋಲನುಭವಿಸಿತು.












Click it and Unblock the Notifications