WPL 2026 Final: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಹಿಂದಿದೆ ಬಿಗ್ ಪ್ಲ್ಯಾನ್
WPL 2026 Final RCB: ಡಬ್ಲ್ಯೂಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಪಿಚ್ ವರದಿ ಹಾಗೂ ಹಿಂದಿನ ಪಂದ್ಯಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಚೇಸಿಂಗ್‌ಗೆ ಅನುಕೂಲವಾಗುವ ಪಿಚ್ ಸ್ಥಿತಿಯ ಹಿನ್ನೆಲೆಯಲ್ಲಿ, ಆರ್‌ಸಿಬಿ ಎದುರಾಳಿ ಡಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಡಿಮೆ ಮೊತ್ತದ ಗುರಿ ನಿಗದಿಪಡಿಸಿ ನಂತರ ಬ್ಯಾಟಿಂಗ್‌ನಲ್ಲಿ ಮುನ್ನಡೆಯುವ ತಂತ್ರವನ್ನು ರೂಪಿಸಿದೆ ಎನ್ನಲಾಗಿದೆ. ಅದರಂತೆಯೇ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆರಂಭಿಸಿದೆ.

ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆಯಲ್ಲಿ ಡೆಲ್ಲಿ: ಮಹಿಳಾ ಪ್ರೀಮಿಯರ್ ಲೀಗ್ 2026ರ ಟೂರ್ನಿ ಫೈನಲ್ ಹಂತಕ್ಕೆ ತಲುಪಿದ್ದು, ಇಂದು (ಫೆಬ್ರವರಿ 5) ವಡೋದರಾ ಬಿಸಿಎ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗಿವೆ. ಈ ಎರಡೂ ತಂಡಗಳು 2024ರ ಫೈನಲ್‌ನಲ್ಲಿ ಎದುರಾಳಿಯಾಗಿದ್ದು, ಆ ವೇಳೆ ಆರ್‌ಸಿಬಿ ತಂಡ ಚಾಂಪಿಯನ್ ಆಗಿತ್ತು. ಡೆಲ್ಲಿ ತಂಡವು ಮೊದಲ ಮೂರು ಆವೃತ್ತಿಗಳಲ್ಲಿ ಫೈನಲ್‌ಗೆ ತಲುಪಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಮೊದಲ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದೆ.
ಫೈನಲ್‌ಗೆ ಮುನ್ನ, ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮಹಿಳಾ ಪ್ರೀಮಿಯರ್ ಲೀಗ್ 2023ರಲ್ಲಿ ಆರಂಭವಾದ ಬಳಿಕ ಬಹುಮಾನದ ಮೊತ್ತದಲ್ಲಿ ಯಾವುದೇ ಹೆಚ್ಚಳ ಕಂಡಿಲ್ಲ. ಹಾಗಾದ್ರೆ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆಬ ತಿಳಿಯಿರಿ.
ಪ್ರಶಸ್ತಿ ಮೊತ್ತದ ವಿವರ: ಡಬ್ಲ್ಯೂಪಿಎಲ್ 2026 ಚಾಂಪಿಯನ್ ತಂಡಕ್ಕೆ 6 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ ಅದರಲ್ಲಿ ಅರ್ಧ, ಅಂದರೆ 3 ಕೋಟಿ ರೂಪಾಯಿ ನಗದು ನೀಡಲಾಗುವುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಅತ್ಯುತ್ತಮ ಫಾರ್ಮ್‌ನಲ್ಲಿವೆ. ಆರ್‌ಸಿಬಿ ತನ್ನ ಮೊದಲ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶಿಸಿದ್ದು, ಬಳಿಕ ಎರಡು ಪಂದ್ಯಗಳಲ್ಲಿ ಸೋತರೂ ಉಳಿದ ಲೀಗ್ ಹಂತದ ಒಂದು ಪಂದ್ಯದಲ್ಲಿ ಗೆದ್ದು ನೇರವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿತು. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ತಲುಪಿತು. ಇದೀಗ ಇಂದು ಡೆಲ್ಲಿ ಹಾಗೂ ಆರ್‌ಸಿಬಿ ಫೈನಲ್ ಸಮರದಲ್ಲಿ ಮುಖಾಮುಖಿಯಾಗಿವೆ.
ಆರ್‌ಸಿಬಿ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಸಯಾಲಿ ಸತ್ಘರೆ, ಲಾರೆನ್ ಬೆಲ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಲಿಜೆಲ್ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ನಿಕಿ ಪ್ರಸಾದ್, ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ಸ್ನೇಹ ರಾಣಾ, ನಲ್ಲಪುರೆಡ್ಡಿ ಚರಣಿ, ಮಿನ್ನು ಮಣಿ, ನಂದನಿ ಶರ್ಮಾ.
ಒಟ್ಟಿನಲ್ಲಿ ಹೇಳುವುದಾದರೆ, ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯೂಪಿಎಲ್‌ನ ಎರಡನೇ ಟ್ರೋಫಿ ಗೆಲ್ಲುವ ಹಠದಲ್ಲಿದ್ದರೆ, ಇತ್ತ ಜೆಮಿಮಾ ರಾಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ.












Click it and Unblock the Notifications