RCB Vs UPW: ಚಿನ್ನಸ್ವಾಮಿಯಲ್ಲಿ ಕೊನೆಯ ಪಂದ್ಯ ಗೆದ್ದ ಸ್ಮೃತಿ ಮಂಧಾನ ಪಡೆ
ಮಹಿಳಾ ಪ್ರೀಮಿಯರ್ ಲೀಗ್ 2024ರ ಪಂದ್ಯಾವಳಿಯ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡ ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಈ ಮೊತ್ತವನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಮಹಿಳಾ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಕೊನೆಯ ಪಂದ್ಯವಾಗಿದ್ದು, ಮುಂದಿನ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.
ಮಂಧಾನ, ಪೆರ್‍ರಿ ಅತ್ಯುತ್ತಮ ಬ್ಯಾಟಿಂಗ್
ಸೋಫಿ ಡಿವೈನ್ ಬದಲಾಗಿ ಮಂಧಾನ ಜೊತೆ ಎಸ್ ಮೇಘನಾ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 51 ರನ್ ಕಲೆ ಹಾಕಿತು. ಮೇಘನಾ 28 ರನ್ ಗಳಿಸಿ ಔಟಾದರು.
ಬಳಿಕ ಜೊತೆಯಾದ ಮಂಧಾನ ಮತ್ತು ಎಲ್ಲಿಸ್ ಪೆರ್‍ರಿ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಆರ್ ಸಿಬಿ ಬೃಹತ್ ಮೊತ್ತ ಗಳಿಸಲು ಸಹಾಯ ಮಾಡಿದರು. ಮಂಧಾನ 50 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಸಹಿತ 80 ರನ್ ಗಳಿಸಿದರೆ, ಎಲ್ಲಿಸ್ ಪೆರ್‍ರಿ 37 ಎಸೆತಗಳಲ್ಲಿ 58 ರನ್ ಗಳಿಸಿದರು. ರಿಚಾ ಘೋಷ್ 10 ಎಸೆತಗಳಲ್ಲಿ 21 ರನ್ ಗಳಿಸಿ ಮಿಂಚಿದರು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ ಉತ್ತಮ ಆರಂಭ ಪಡೆದರೂ ಮಧ್ಯಮ ಓವರ್ ಗಳಲ್ಲಿ ಎಡವಿತು. ನಾಯಕಿ ಅಲಿಸ್ಸಾ ಹೀಲಿ 55 ರನ್ ಗಳಿಸಿದರೆ ಉಳಿದ ಬ್ಯಾಟರ್ ಗಳು ದೊಡ್ಡ ಮೊತ್ತ ಗಳಿಸಲಿಲ್ಲ. ದೀಪ್ತಿ ಶರ್ಮಾ 33 ರನ್, ಪೂನಮ್ ಖೇಮ್ನರ್ 31 ರನ್ ಗಳಿಸಿದರು.
ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಆಶಾ ಶೋಭನಾ, ಸೋಫಿ ಮೋಲಿನಿ ತಲಾ ಎರಡು ವಿಕೆಟ್ ಪಡೆದರು. ಆರ್ ಸಿಬಿ ಸಂಘಟಿತ ಬೌಲಿಂಗ್ ದಾಳಿ ಸುಲಭ ಗೆಲುವಿಗೆ ಸಹಕಾರಿಯಾಯಿತು.












Click it and Unblock the Notifications