RCB: ಆರ್‌ಸಿಬಿ ತಂಡಕ್ಕೆ ನಾಯಕರಾಗಲು ಇವರ ನಡುವೆ ಪೈಪೋಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಗೆ ಇನ್ನು ಒಂದೂವರೆ ತಿಂಗಳು ಬಾಕಿ ಇದೆ. ಮಾರ್ಚ್ 21ರಂದು ಐಪಿಎಲ್ ಆರಂಭವಾಗಲಿದ್ದು ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿದ್ದು ಪ್ರಶಸ್ತಿ ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಕೆಕೆಆರ್, ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇನ್ನೂ ಈ ಬಾರಿ ನಾಯಕ ಯಾರು ಎನ್ನುವ ವಿಚಾರವನ್ನು ಬಹಿರಂಗಪಡಿಸಿಲ್ಲ. ಆರ್ ಸಿಬಿ ಈ ಬಾರಿ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಮೂರು ಆವೃತ್ತಿಗಳಲ್ಲಿ ಆರ್ ಸಿಬಿಯನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್‌ರನ್ನು ಮೆಗಾ ಹರಾಜಿಗೆ ಮುನ್ನ ಕೈಬಿಡಲಾಗಿದ್ದು, ವಿರಾಟ್ ಕೊಹ್ಲಿ, ಯಶ್ ದಯಾಳ್ ಮತ್ತು ರಜತ್ ಪಟಿದಾರ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು. ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಿ ನಾಯಕತ್ವದ ಹೊಣೆ ನೀಡಲಾಗುತ್ತದೆ ಎನ್ನಲಾಗಿತ್ತು.

ಆದರೆ ಮೆಗಾ ಹರಾಜಿನಲ್ಲಿ ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದ ಆರ್ ಸಿಬಿ ಹೊಸ ತಂಡವನ್ನು ಕಟ್ಟಿದೆ. ನಾಯಕನಾಗುವುದು ಯಾರು ಎನ್ನುವ ಪ್ರಶ್ನೆಯಿದ್ದು ವಿರಾಟ್ ಕೊಹ್ಲಿಯೇ ಈ ಬಾರಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.
ಆರ್ ಸಿಬಿ ಸಿಒಒ ಹೇಳಿದ್ದೇನು?
ಆರ್‌ಸಿಬಿ ಸಿಒಒ ರಾಜೇಶ್ ಮೆನನ್ ಈ ಸ್ಪೋರ್ಟ್ ತಕ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಪ್ರಸ್ತುತ ನಾವು ಏನನ್ನೂ ನಿರ್ಧರಿಸಿಲ್ಲ. ನಮ್ಮ ತಂಡದಲ್ಲಿ ನಾಯಕರಾಗಲು ಅರ್ಹತೆ ಇರುವ 4-5 ಆಟಗಾರರು ಇದ್ದಾರೆ, ನಾವು ಯಾರನ್ನು ಆಯ್ಕೆ ಮಾಡಬೇಕು ಎಮದು ಇನ್ನೂ ಚರ್ಚೆ ಮಾಡಿಲ್ಲ, ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ ಅವರು 143 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 66 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 70 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಮೆಗಾ ಹರಾಜಿನಲ್ಲಿ ಆರ್ ಸಿಬಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಸೇರಿದಂತೆ ಅನೇಕ ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಎಂತಹ ಆಟಗಾರರು ಬೇಕು ಎನ್ನುವುದನ್ನು ಲೆಕ್ಕಾಚಾರ ಹಾಕಿಕೊಂಡು ಅದಕ್ಕೆ ತಕ್ಕಂತೆ ಆಟಗಾರರನ್ನು ಖರೀದಿ ಮಾಡಲಾಗಿದೆ. ನಮಗೆ ಬೇಕಾದ ತಂಡವೇ ಸಿಕ್ಕಿದೆ ಎಂದು ರಾಜೇಶ್ ಮೆನನ್ ಹೇಳಿದ್ದಾರೆ.
ರಾಜೇಶ್ ಮೆನನ್ ಹೇಳಿಕೆ ಪ್ರಕಾರ ವಿರಾಟ್ ಕೊಹ್ಲಿ ಒಪ್ಪಿಕೊಂಡರೇ ಅವರೇ ನಾಯಕರಾಗುವುದು ಖಚಿತ, ಬೇರೆ ಆಯ್ಕೆ ಬಯಸಿದರೆ ರಜತ್ ಪಟಿದಾರ್, ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ ನಾಯಕತ್ವಕ್ಕೆ ಉತ್ತಮ ಆಯ್ಕೆಗಳಾಗಿವೆ.












Click it and Unblock the Notifications