RCB vs KKR: ಹಿಟ್ ವಿಕೆಟ್ ಆದರೂ ಸುನಿಲ್ ನರೇನ್ ನಾಟೌಟ್! ನಿಯಮ ಹೇಳೋದೇನು?
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಸಾಕಷ್ಟು ಡ್ರಾಮಾ ನೋಡಲು ಸಿಕ್ಕಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡುತ್ತಿದ್ದು ಅಂಪೈರ್ ತೀರ್ಮಾನ ವಿವಾದಕ್ಕೆ ಕಾರಣವಾಗಿದೆ. ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಕೆಕೆಆರ್ ಬ್ಯಾಟಿಂಗ್ ಆರಂಭಿಸಿತು. 8ನೇ ಓವರ್ ನಲ್ಲಿ ಸುನಿಲ್ ನರೈನ್ ಬ್ಯಾಟ್‌ನಿಂದ ವಿಕೆಟ್‌ಗೆ ತಾಕಿಸಿ ಬೇಲ್ಸ್ ಕೆಳಗಡೆ ಬಿದ್ದರೂ ಅಂಪೈರ್ ಔಟ್ ಕೊಡದೇ ಇರುವುದು ಚರ್ಚೆಗೆ ಕಾರಣವಾಯಿತು.
ಬ್ಯಾಟರ್ ಬ್ಯಾಟ್‌ನಿಂದ ವಿಕೆಟ್ ತಾಗಿದಾಗ ಬೇಲ್ಸ್ ಕೆಳಗಡೆ ಬಿದ್ದಾಗ ಅದನ್ನು ಹಿಟ್ ವಿಕೆಟ್ ಎಂದು ಪರಿಗಣಿಸಲಾಗುತ್ತದೆ ಈ ಸಂದರ್ಭದಲ್ಲಿ ಬ್ಯಾಟರ್ ನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಸುನಿಲ್ ನರೈನ್‌ಗೆ ಔಟ್ ಕೊಡದೇ ಇರುವುದು ಆರ್ ಸಿಬಿ ಅಭಿಮಾನಿಗಳನ್ನು ಕೆರಳಿಸಿತು. ಪಂದ್ಯ ಫಿಕ್ಸ್ ಆಗಿದೆ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ನಿಯಮ ಹೇಳುವುದೇನು?
ಮೈದಾನದಲ್ಲಿದ್ದ ಅಂಪೈರ್‌ಗಳಾದ ಅಭಿಜೀತ್ ಬೆಂಗೇರಿ ಮತ್ತು ವಿನೋದ್ ಶೇಷನ್ ಔಟ್ ಕೊಡದೇ ಇರುವುದು ಸರಿಯಾದ ನಿರ್ಧಾರವಾಗಿದೆ. ರಸಿಕ್ ಸಲಾಂ ದಾರ್ ಎಸೆತವನ್ನು ಲೆಗ್ ಅಂಪೈರ್ ವೈಡ್ ಎಂದು ಪರಿಗಣಿಸಿ ತೀರ್ಪು ನೀಡಿದರು. ನರೈನ್ ಚೆಂಡನ್ನು ಜೋರಾಗಿ ಹೊಡೆಯಲು ಬಲವಾಗಿ ಬೀಸಿಲು ಮುಂದಾದರು, ಆದರೆ ಚೆಂಡು ಅವರ ತಲೆಯ ಮೇಲೆ ಹೋದ ಕಾರಣ ಬ್ಯಾಟ್ ಬೀಸಲು ಹೋಗಿ ಸುಮ್ಮನಾದರು. ತಮ್ಮ ಬ್ಯಾಟ್ ಅನ್ನು ಕೆಳಗೆ ಹಾಕುವಾಗ, ನರೈನ್ ಬೇಲ್ಸ್ ಅನ್ನು ಹೊಡೆದರು.
ಅಂಪೈರ್ ಗಳು ಇದನ್ನು ಗಮನಸಿದರೂ ಯಾವ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ಟಿಮ್ ಡೇವಿಡ್ ಮೇಲ್ಮನವಿ ಸಲ್ಲಿಸಿದಾಗ ಕೂಡ ಅಂಪೈರ್ ಗಳು ಸುಮ್ಮನಿದ್ದರು. ಔಟ್ ಇದ್ದರೂ ಅಂಪೈರ್ ಗಳು ಔಟ್ ಕೊಟ್ಟಿಲ್ಲ ಎನ್ನುವುದು ಅಭಿಮಾನಿಗಳ ಆರೋಪ, ಆದರೆ ಅಂಪೈರ್ ಗಳು ನಿಯಮದ ಪ್ರಕಾರವೇ ನಡೆದುಕೊಂಡಿದ್ದಾರೆ.
ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಪ್ರಕಾರ, ಒಬ್ಬ ಬ್ಯಾಟರ್ ಬಾಲ್ ಹೊಡೆಯಲು ಪ್ರಯತ್ನಿಸಿದಾಗ ಮಾತ್ರ ವಿಕೆಟ್‌ಗೆ ಬ್ಯಾಟ್ ತಾಕಿದರೆ ಅದನ್ನು ಹಿಟ್ ವಿಕೆಟ್ ಎಂದು ನಿರ್ಣಯಿಸಬಹುದು. ಆದರೆ ನರೈನ್ ಶಾಟ್ ಹೊಡೆಯಲು ಕೂಡ ಪ್ರಯತ್ನ ಮಾಡದೇ ಇದ್ದ ಕಾರಣ ಅವರನ್ನು ನಾಟೌಟ್ ಎಂದು ನಿರ್ಣಯಿಸಲಾಯಿತು.
"ವೈಡ್ ಬಾಲ್ ಆದರೂ ಹಿಟ್ ವಿಕೆಟ್ ನೀಡಬಹುದು. ಆದರೆ ಮುಖ್ಯವಾದ ಷರತ್ತು ಏನೆಂದರೆ ಬ್ಯಾಟರ್ ಚೆಂಡನ್ನು ಆಡುವಾಗ ಅಥವಾ ಆಡಲು ತಯಾರಿ ಮಾಡುವಾಗ ಸ್ಟಂಪ್‌ಗಳನ್ನು ಹೊಡೆದು ಬೇಲ್ಸ್ ಕೆಳಗೆ ಬೀಳಿಸಬೇಕು. ಅದು ಕಾನೂನುಬದ್ಧ ಡೆಲಿವರಿ ಆಗಿರಲಿ ಅಥವಾ ವೈಡ್ ಆಗಿರಲಿ ಔಟ್ ನೀಡಲಾಗುತ್ತದೆ. ಆದರೆ, ಬಾಲ್ ಪಾಸ್ ಆದ ನಂತರ ಬ್ಯಾಟರ್ ಸ್ಟಂಪ್‌ಗಳನ್ನು ಡಿಸ್ಅಸೆಂಬಲ್ ಮಾಡಿದರೆ ಮತ್ತು ಅವರು ಅದನ್ನು ಆಡಲು ಪ್ರಯತ್ನಿಸದಿದ್ದರೆ ಅದನ್ನು ಔಟ್ ಕೊಡಲು ಆಗುವುದಿಲ್ಲ" ಎಂದು ನಿಯಮ ಹೇಳುತ್ತದೆ.












Click it and Unblock the Notifications