Virat Kohli: ವಿರಾಟ್ ಕೊಹ್ಲಿಗೆ ಸೇರಿದ ಬೆಂಗಳೂರಿನ ರೆಸ್ಟೋರೆಂಟ್ ಮೇಲೆ ಕೇಸ್, ಏನಿದು ಪ್ರಕರಣ?
Virat Kohli: ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ 'One8 Commune' ಬಾರ್ ಎಂಡ್ ರೆಸ್ಟೋರೆಂಟ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ (suo motu) ದೂರು ದಾಖಲಿಸಿಕೊಂಡಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಧೂಮಪಾನಕ್ಕೆ ನಿರ್ದಿಷ್ಟ ಪ್ರದೇಶ (Designated Smoking Zone) ಇರಲಿಲ್ಲ ಎಂಬ ಆರೋಪದ ಮೇಲೆ, COTPA ಕಾಯ್ದೆಯ ಸೆಕ್ಷನ್ 4 ಮತ್ತು 21ರ ಅಡಿ ಪ್ರಕರಣ ದಾಖಲಾಗಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಧೂಮಪಾನ ನಿಯಂತ್ರಣ ಕಾಯ್ದೆಯ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ಮಾಡಲು ನಿರ್ದಿಷ್ಟ ಪ್ರದೇಶ ಇರಬೇಕು. ಆದರೆ, One8 Commune ಇದನ್ನು ಪಾಲಿಸದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ಬೆಂಗಳೂರು ರಾಯೆಲ್ ಚಾಲೆಂಜರ್ಸ್ ತಂಡ ಐಪಿಎಲ್ 2025ರ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು, 18 ವರ್ಷಗಳ ಆರ್ಬಿಸಿ ಅಭಿಮಾನಿಗಳ ಕನಸು ಈ ಬಾರಿ ನನಸಾಗುವ ನಿರೀಕ್ಷೆ ಹೆಚ್ಚಿದೆ. ಇತ್ತ ಫಿನಾಲೆಗೂ ಮುನ್ನವೇ ವಿರಾಟ್ ಕೊಹ್ಲಿಗೆ ಬೆಂಗಳೂರಲ್ಲಿ ಹೊಸ ಸಂಕಷ್ಟ ಶುರುವಾಗಿದೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರು ಅಂದ್ರೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಅವರಿಗೆ ಅಚ್ಚುಮೆಚ್ಚಾಗಿದೆ. ಹೀಗಾಗಿ ವಿರಾಟ್ ಬೆಂಗಳೂರಲ್ಲಿ ಕೆಲ ಹೂಡಿಕೆ ಮಾಡಿ, ಬ್ಯುಸಿಸೆಸ್ ಮಾಡ್ತಿದ್ದಾರೆ. ಕಸ್ತೂರ್ ಬಾ ರಸ್ತೆಯಲ್ಲಿರುವ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಎಂಬ ರೆಸ್ಟೋರೆಂಟ್ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಕೊಟ್ಪಾ ಕಾಯ್ದೆ ಉಲ್ಲಂಘನೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಹ್ಲಿ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ಮೀಸಲಿಡದೆ, ರೆಸ್ಟೋರೆಂಟ್ ನಲ್ಲಿಯೇ ಧೂಮಪಾನಕ್ಕೆ ಅವಕಾಶ ನೀಡಿದ್ದ ಕಾರಣಕ್ಕೆ ವಿರಾಟ್ ಕೊಹ್ಲಿಗೆ ಹೊಸ ಸಂಕಷ್ಟ ಶುರುವಾಗಿದೆ. ಒನ್ 8 ಕಮ್ಯೂನ್ ಬಾರ್ & ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 29ರಂದು ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ರೆಸ್ಟೋರೆಂಟ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ನಂತರ ನ್ಯಾಯಾಲಯದಿಂದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.
ಡಿಸೆಂಬರ್ 2024 ರಲ್ಲಿ, ಬಿಬಿಎಂಪಿಯು ಅಗ್ನಿಶಾಮಕ ಸುರಕ್ಷತೆಯ ಅನುಮೋದನೆ ಇಲ್ಲದ ಆರೋಪದ ಮೇಲೆ ಒನ್8 ಕಮ್ಯೂನ್ ವ್ಯವಸ್ಥಾಪಕರಿಗೆ ಎರಡನೇ ಪತ್ರವನ್ನು ನೀಡಿತ್ತು. ಜುಲೈ 2024 ರಲ್ಲಿ, ಬೆಂಗಳೂರು ನಗರ ಪೊಲೀಸರು ಒನ್8 ಕಮ್ಯೂನ್ ವ್ಯವಸ್ಥಾಪಕರ ವಿರುದ್ಧ ಅವಧಿ ಮೀರಿ ರೆಸ್ಟೋರೆಂಟ್ ನಡೆಸಿದ್ದಕ್ಕೆ ಇದೇ ರೆಸ್ಟೋರೆಂಟ್ ಮೇಲೆ ಕೇಸ್ ದಾಖಲಿಸಲಾಗಿತ್ತು. ಈಗ ಮತ್ತೆ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದ್ದು, ಐಪಿಎಲ್ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಹೊಸ ಸಂಕಷ್ಟ ಶುರುವಾಗಿದೆ.












Click it and Unblock the Notifications