Virat Kohli: ಭಾರತ ಬಿಟ್ಟು ಈ ದೇಶದಲ್ಲಿ ನೆಲೆಸಲಿದ್ದಾರೆ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ರಿಕೆಟಿಗ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉತ್ತಮ ಫಾರ್ಮ್‌ಗೆ ಮರಳಲು ಪ್ರಯತ್ನ ಪಡುತ್ತಿರುವ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಟೆಸ್ಟ್ ಮಾದರಿಗೂ ವಿದಾಯ ಹೇಳಬಹುದು ಎನ್ನುವ ಸುದ್ದಿ ಇದೆ. 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಈ ಮಧ್ಯೆಯೇ ಕೊಹ್ಲಿ ಭಾರತವನ್ನು ತೊರೆಯಲಿದ್ದಾರೆ ಎನ್ನುವು ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಅವರ ಹೇಳಿಕೆ ಪ್ರಕಾರ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳ ಜೊತೆ ಇಂಗ್ಲೆಂಡ್‌ಗೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ತಮಗೆ ಸಮಯ ಸಿಕ್ಕಾಗಲೆಲ್ಲಾ ಪತ್ನಿ, ಮಕ್ಕಳ ಜೊತೆ ಲಂಡನ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ, ರಾಜ್‌ಕುಮಾರ್ ಶರ್ಮಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಕಾಯ್ ಹೆರಿಗೆ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಗಳ ಜೊತೆ ಲಂಡನ್ ಬೀದಿಗಳಲ್ಲಿ ಆರಾಮಾಗಿ ಸುತ್ತಾಡುತ್ತಿರುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ರಾಜ್‌ಕುಮಾರ್ ಶರ್ಮಾ ಹೇಳಿದ್ದೇನು?
"ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳ ಜೊತೆ ಲಂಡನ್‌ಗೆ ಸ್ಥಳಾಂತರಗೊಳ್ಳಲು ಬಯಸಿದ್ದಾರೆ. ಕೊಹ್ಲಿ ಶೀಘ್ರದಲ್ಲೇ ಭಾರತವನ್ನು ತೊರೆದು ಇಂಗ್ಲೆಂಡ್‌ನಲ್ಲಿ ನೆಲೆಸಲಿದ್ದಾರೆ. ಕ್ರಿಕೆಟ್ ಇಲ್ಲದ ಸಂದರ್ಭದಲ್ಲಿ ಕೊಹ್ಲಿ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಯೇ ಕಳೆಯುತ್ತಿದ್ದಾರೆ" ಎಂದು ರಾಜ್‌ಕುಮಾರ್ ಶರ್ಮಾ ತಿಳಿಸಿರುವುದಾಗಿ ದೈನಿಕ್ ಜಾಗರಣ್ ವರದಿ ಮಾಡಿದೆ.
36 ವರ್ಷದ ವಿರಾಟ್ ಕೊಹ್ಲಿ ಇನ್ನೆಷ್ಟು ವರ್ಷ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಆಡುತ್ತಾರೆ ಎನ್ನುವುದು ಗೊತ್ತಿಲ್ಲ. ರವಿಚಂದ್ರನ್ ಅಶ್ವಿನ್ ದಿಢೀರ್ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಬೆನ್ನಲ್ಲೇ ಕೊಹ್ಲಿ, ರೋಹಿತ್ ಶರ್ಮಾರಂತಹ ಹಿರಿಯ ಆಟಗಾರರು ನಿವೃತ್ತಿ ಬಗ್ಗೆ ಗಂಭೀರವಾಗಿ ಯೋಚಿಸುವ ಸಾಧ್ಯತೆ ಕೂಡ ಇದೆ.
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿ ಒಂದು ವೇಳೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಅದೇ ಸಂದರ್ಭದಲ್ಲಿ ಕೊಹ್ಲಿ, ರೋಹಿತ್ ಟೆಸ್ಟ್ ಮಾದರಿಗೆ ವಿದಾಯ ಹೇಳಿದರೂ ಅಚ್ಚರಿ ಪಡಬೇಕಾಗಿಲ್ಲ.
ಐಪಿಎಲ್ ಸಂದರ್ಭದಲ್ಲಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದ ವಿರಾಟ್ ಕೊಹ್ಲಿ ಈಗಲೇ ಅದರ ಬಗ್ಗೆ ಯೋಚಿಸಿಲ್ಲ ಎಂದಿದ್ದರು. "ಕ್ರೀಡಾಪಟುವಾಗಿ ನಾವು ನಮ್ಮ ವೃತ್ತಿ ಜೀವನವನ್ನ ಕೊನೆಯಾಗಿಸಲೇಬೇಕು. ಇದೇ ದಿನ ನಿವೃತ್ತಿಯಾಗಬೇಕು ಎನ್ನುವ ಯೋಚನೆಯಿಲ್ಲ. ನಾನು ಇಂದು ಏನು ಮಾಡಬೇಕು ಅದನ್ನಷ್ಟೇ ಯೋಚಿಸುತ್ತೇನೆ, ಒಮ್ಮೆ ನಾನು ನನ್ನ ಕೆಲಸ ಮುಗಿಸಿದರೆ ನಾನು ಹೋಗುತ್ತೇನೆ, ಕೆಲವು ದಿನ ಯಾರಿಗೂ ಸಿಗುವುದಿಲ್ಲ" ಎಂದಿದ್ದರು.












Click it and Unblock the Notifications