Virat Kohli: ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ದಾಖಲೆಗಳ ಸರದಾರ. ಕೊಹ್ಲಿ ಆಡುವಾಗೆಲ್ಲಾ ಯಾವುದಾದರೂ ಒಂದು ದಾಖಲೆ ಮುರಿಯುತ್ತದೆ ಹೊಸ ದಾಖಲೆ ನಿರ್ಮಾಣವಾಗುತ್ತದೆ. ದುಬೈನಲ್ಲಿ ನಡಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ದಶಕಗಳಿಂದ ಏಕದಿನ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಕೊಹ್ಲಿ ಅಂದುಕೊಂಡಂತೆ ಉತ್ತಮ ಫಾರ್ಮ್‌ನಲ್ಲಿ ಇಲ್ಲದೇ ಇದ್ದರೂ ಹಲವು ದಾಖಲೆಗಳನ್ನು ಮಾತ್ರ ಮುರಿಯುತ್ತಲೇ ಇದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿದಾಗ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ದಾಖಲೆ ಮಾಡಿದರು. ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಾಕ್ಕರ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಮೂರನೇ ಆಟಗಾರ ಎನ್ನುವ ಸಾಧನೆ ಮಾಡಿದರು.
ವೇಗವಾಗಿ 14,000 ರನ್
ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಾಕ್ಕರ ಏಕದಿನ ಕ್ರಿಕೆಟ್‌ನಲ್ಲಿ 14,000 ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದರೂ, ಅತಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಇದೀಗ ಕೊಹ್ಲಿ ಪಾಲಾಗಿದೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ್ ಸಂಗಾಕ್ಕರ 380 ಇನ್ನಿಂಗ್ಸ್‌ಗಳಲ್ಲಿ 41.98 ಸರಾಸರಿಯಲ್ಲಿ 14,234 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 286 ಇನ್ನಿಂಗ್ಸ್‌ಗಳಲ್ಲಿ 57.78 ಸರಾಸರಿಯಲ್ಲಿ 14,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಶತಕ ಸಿಡಿಸಿದ ಕಿಂಗ್, ಭಾರತಕ್ಕೆ ಗೆಲುವು
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕೊನೆಯವರೆಗೂ ಆಡಿದ ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಲ್ಲದೆ, ತಮ್ಮ 51ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಪೂರೈಸಿದರು. 111 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ ಅವರು ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಪಾಕಿಸ್ತಾನದ ವಿರುದ್ಧ ಇದು ವಿರಾಟ್ ಕೊಹ್ಲಿ ಅವರ 4ನೇ ಶತಕವಾಗಿದ್ದು, ಐಸಿಸಿ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಡುವುದನ್ನು ಮುಂದುವರೆಸಿದರು.












Click it and Unblock the Notifications