Virat Kohli: ಮತ್ತೆ ಕೆಣಕಿದ ಆಸ್ಟ್ರೇಲಿಯಾ ಫ್ಯಾನ್ಸ್; ವಿರಾಟ್ ಕೊಹ್ಲಿ ಮಾಡಿದ್ದೇನು?
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಎರನಡೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಇನ್ನೂ 310 ರನ್‌ಗಳ ಹಿನ್ನಡೆಯಲ್ಲಿದೆ. ಒಂದು ಕಡೆ ಬ್ಯಾಟರ್ ಕೈಕೊಟ್ಟಿದ್ದರೆ ಇನ್ನೊಂದು ಕಡೆ ವಿರಾಟ್ ಕೊಹ್ಲಿಯನ್ನು ಪದೇ ಪದೇ ಕೆಣಕುತ್ತಿರುವುದು ಭಾರತದ ಅಭಿಮಾನಿಗಳನ್ನು ಸಿಟ್ಟಿಗೇಳಿಸಿದೆ.
ಟೆಸ್ಟ್‌ನ ಮೊದಲ ದಿನ ವಿರಾಟ್ ಕೊಹ್ಲಿ ಮತ್ತು ಸ್ಯಾನ್ ಕೋನ್‌ಸ್ಟಾಸ್ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ರೊಚ್ಚಿಗೆದ್ದಿದ್ದ ಆಸ್ಟ್ರೇಲಿಯಾ ಫ್ಯಾನ್ಸ್ ಪದೇ ಪದೇ ಕೊಹ್ಲಿಯನ್ನು ಕೆಣಕುತ್ತಲೇ ಇದ್ದಾರೆ. ಕೊಹ್ಲಿ ಕೂಡ ಯಾವುದನ್ನೂ ಇಟ್ಟುಕೊಳ್ಳದೆ ವಾಪಸ್ ಕೊಡುತ್ತಿದ್ದಾರೆ.

2ನೇ ದಿನ ಕೂಡ ಕೊಹ್ಲಿಯನ್ನು ಕೆಣಕುವುದನ್ನು ಆಸ್ಟ್ರೇಲಿಯನ್ನರು ಮುಂದುವರೆಸಿದ್ದಾರೆ. 36 ರನ್ ಗಳಿಸಿ ಔಟಾದ ಬಳಿಕ ಡ್ರೆಸ್ಸಿಂಗ್ ರೂಂಗೆ ಹೋಗುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಅಭಿಮಾನಿಗಳು ಜೋರಾಗಿ ಕಿರುಚುವ ಮೂಲಕ ಕೊಹ್ಲಿಯನ್ನು ಕೆಣಕಲು ಪ್ರಯತ್ನಿಸಿದರು ಆದರೆ ಆಸ್ಟ್ರೇಲಿಯಾದ ಅಭಿಮಾನಿಯೊಬ್ಬ ಜೋರಾಗಿ ಕೊಹ್ಲಿ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ಕಿರುಚಿದ್ದಾನೆ.
ಡ್ರೆಸ್ಸಿಂಗ್ ರೂಂಗೆ ಹೋಗುತ್ತಿದ್ದ ವಿರಾಟ್ ಕೊಹ್ಲಿ ಅದನ್ನು ಕೇಳಿಸಿಕೊಂಡು ಸಿಟ್ಟಿಗೆದ್ದು ವಾಪಸ್ ಬಂದರು. ಆದರೆ ಮೈದಾನದಲ್ಲಿ ಹಾಜರಿದ್ದ ಸಿಬ್ಬಂದಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಕ್ಷಣವೇ ಕೊಹ್ಲಿ ಬಳಿಗೆ ಓಡಿ ಬಂದರು. ಕೊಹ್ಲಿ ಭುಜದ ಮೇಲೆ ಕೈಹಾಕಿ ಸಮಾಧಾನ ಮಾಡಿದರು, ಇಂತಹ ನಿಂದನೆಗಳನ್ನು ನಿರ್ಲಕ್ಷಿಸುವಂತೆ ಮನವಿ ಮಾಡಿದರು. ಬಳಿಕ ಕೊಹ್ಲಿ ಸಮಾಧಾನ ಮಾಡಿಕೊಂಡು ಡ್ರೆಸ್ಸಿಂಗ್ ರೂಂಗೆ ತೆರಳಿದರು.
ಆಫ್‌ಸ್ಟಂಪ್‌ನಿಂದ ಹೊರಹೋಗುವ ಚೆಂಡನ್ನು ಮುಟ್ಟದಂತೆ ಎಚ್ಚರಿಕೆಯಿಂದ ಆಡುತ್ತಿದ್ದ ವಿರಾಟ್ ಕೊಹ್ಲಿ ಜೈಸ್ವಾಲ್ ರನ್‌ಔಟ್ ಆಗುತ್ತಿದ್ದಂತೆ ತಮ್ಮ ಏಕಾಗ್ರತೆಯನ್ನು ಕಳೆದುಕೊಂಡರು. ಮುಂದಿನ ಎಸೆತದಲ್ಲೇ ಅವರು ಬೊಲ್ಯಾಂಡ್ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ಕೊಟ್ಟು ಔಟಾದರು. 36 ರನ್ ಗಳಿಸಿದ್ದ ಅವರು ಔಟಾಗುತ್ತಿದ್ದಂತೆ ಭಾರತ ತಂಡದ ಅಭಿಮಾನಿಗಳಿಗೂ ನಿರಾಸೆಯಾಯಿತು.
ಮೊದಲನೇ ದಿನವೂ ಕಿರಿಕ್
ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ ಕೊಹ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೋನ್‌ಸ್ಟಾಸ್ ಅವರ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಕೊಹ್ಲಿ ನಡೆಯುವಾಗ ಕೋನ್‌ಸ್ಟಾಸ್ ಭುಜಕ್ಕೆ ತಾಗಿದ ಪರಿಣಾಮ ಇಬ್ಬರು ವಾಗ್ವಾದದಲ್ಲಿ ತೊಡಗಿದರು. ಉಸ್ಮಾನ್ ಖವಾಜ ಮತ್ತು ಆನ್‌ಫೀಲ್ಡ್ ಅಂಪೈರ್ ಮಧ್ಯಪ್ರವೇಶಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು. ಆದರೂ ವಿರಾಟ್ ಕೊಹ್ಲಿಗೆ ಐಸಿಸಿ ಪಂದ್ಯದ ಶುಲ್ಕದ ಶೇ. 20ರಷ್ಟು ದಂಡವನ್ನು ವಿಧಿಸಲಾಯಿತು.
ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ರಿಕಿ ಪಾಂಟಿಂಗ್ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಕೊಹ್ಲಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಫಿಲ್ಡಿಂಗ್ ಸಮಯದಲ್ಲೂ ಸಹ ಕೊಹ್ಲಿಯನ್ನು ಪ್ರೇಕ್ಷಕರು ಕೆಣಕಿದ್ದರು. ಕೊಹ್ಲಿ ಕೂಡ ಮತ್ತಷ್ಟು ಜೋರಾಗಿ ಕೂಗುವಂತೆ ಸನ್ನೆ ಮಾಡಿದ್ದರು.












Click it and Unblock the Notifications