Paris Olympics: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೀಶ್, ಅಂಶು, ರಿತಿಕಾ
ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಪ್ಯಾರೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಓಲಿಂಪಿಕ್ಸ್ ಕೋಟಾ ಪಡೆದಿದ್ದಾರೆ. ಇವರಲ್ಲದೆ, ಅಂಶು ಮಲಿಕ್ (57 ಕೆಜಿ) ಮತ್ತು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ರಿತಿಕಾ (76 ಕೆಜಿ) ಸಹ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ತಮ್ಮ ಟಿಕೆಟ್‌ಗಳನ್ನು ಖಚಿತಪಡಿಸಿಕೊಂಡರು.
ಭಾರತದ ಮಾಜಿ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟಿಸಿ ಸುದ್ದಿಯಲ್ಲಿದ್ದ, ವಿನೇಶ್ ಫೋಗಟ್ ಅಂತಾರಾಷ್ಟ್ರೀಯ ರಿಂಗ್‌ನಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ವಿನೇಶ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್‌ನ ಲಾರಾ ಗಣಿಕ್ಯಾಜಿ ಅವರನ್ನು 10-0 ಅಂತರದಿಂದ ಸೋಲಿಸುವ ಮೂಲಕ ಒಲಿಂಪಿಕ್ ಕೋಟಾವನ್ನು ಭದ್ರಪಡಿಸಿಕೊಂಡರು. ಅವರು ಲಾರಾ ವಿರುದ್ಧದ ಪಂದ್ಯವನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 4 ನಿಮಿಷ 18 ಸೆಕೆಂಡುಗಳಲ್ಲಿ ಗೆದ್ದರು. ವಿನೇಶ್ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್‌ಗೆ ಕೋಟಾ ಪಡೆದುಕೊಂಡಿದ್ದಾರೆ. ಅವರು 2020 ಟೋಕಿಯೊ ಮತ್ತು 2016 ರ ರಿಯೊ ಒಲಿಂಪಿಕ್ಸ್‌ಗೆ ಕೋಟಾವನ್ನು ಪಡೆದುಕೊಂಡಿದ್ದಾರೆ. ಸತತ ಮೂರು ಒಲಿಂಪಿಕ್ಸ್‌ಗೆ ಕೋಟಾ ಸಾಧಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್ ಅರ್ಹತೆ
ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತಕ್ಕೆ ಎರಡನೇ ಕುಸ್ತಿ ಕೋಟಾವನ್ನು ಪಡೆದಿದ್ದಾರೆ. ಅವಳಿಗಿಂತ ಮೊದಲು, ಅಂತಿಮ್ ಪಂಗಲ್ 53 ಕೆಜಿಯಲ್ಲಿ ಒಲಿಂಪಿಕ್ ಕೋಟಾವನ್ನು ಸಾಧಿಸಿದ್ದರು. ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟಾರೆ 45ನೇ ಕೋಟಾವಾಗಿದೆ. ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ, ಫೋಗಟ್ ಯಾವುದೇ ಅಂಕಗಳನ್ನು ಕಳೆದುಕೊಳ್ಳದೆ ಅರ್ಹತಾ ಪಂದ್ಯಗಳ ಫೈನಲ್ ತಲುಪಿದರು. ಪ್ಯಾರಿಸ್ ಒಲಿಂಪಿಕ್ಸ್‌ನ ಕೊನೆಯ ವಿಶ್ವ ಅರ್ಹತಾ ಪಂದ್ಯವು ಮೇ 9 ರಿಂದ ಟರ್ಕಿಯಲ್ಲಿ ನಡೆಯಲಿದೆ. ಇದು 29 ವರ್ಷದ ವಿನೇಶ್ ಅವರ ಸತತ ಮೂರನೇ ಒಲಿಂಪಿಕ್ ಕೋಟಾ.
ಭರ್ಜರಿ ಪ್ರದರ್ಶನ
ವಿಶ್ವ ಚಾಂಪಿಯನ್‌ಶಿಪ್ 2021 ರ ಬೆಳ್ಳಿ ಪದಕ ವಿಜೇತೆ ಅಂಶು ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಲೆಲೋಖೋವ್ ಸೊಬೊಯಿರೋವಾ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಮೂಲಕ ಗೆದ್ದರು. 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ರಿತಿಕಾ (76 ಕೆಜಿ) ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸೆಮಿಫೈನಲ್‌ನಲ್ಲಿ ರಿತಿಕಾ ಅವರು ಚೈನೀಸ್ ತೈಪೆಯ ಹುಯಿ ಸಿಜ್ ಚಾಂಗ್ ವಿರುದ್ಧ 7-0ಯಿಂದ ಸುಲಭವಾಗಿ ಗೆದ್ದರು. ಈ ಮೂಲಕ ಈ ವರ್ಷ ಪ್ಯಾರೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಿದ್ದಾರೆ.

ಮಾನ್ಸಿ ಅಹ್ಲಾವತ್ (62 ಕೆ.ಜಿ.) ಕೂಡ ಕೊನೆಯ ನಾಲ್ಕರ ಘಟ್ಟ ತಲುಪಿದ್ದು, ಇದಕ್ಕಾಗಿ ಅವರು ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕಾಗಿತ್ತು. ಅವರು ಕಜಕಿಸ್ತಾನದ ಐರಿನಾ ಕುಜ್ನೆಟ್ಸೊವಾ ಅವರನ್ನು 6-4 ರಿಂದ ಸೋಲಿಸಿದರು. ಭಾರತದ ಒಬ್ಬ ಕುಸ್ತಿಪಟು ನಿಶಾ ದಹಿಯಾ (68 ಕೆಜಿ) ಮಾತ್ರ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.












Click it and Unblock the Notifications