ವೈಭವ್ ಇನ್ನೂ ಏನು ಅಲ್ಲ, ಸಚಿನ್ ತೆಂಡೂಲ್ಕರ್ ಕಾಲಿನ ಧೂಳಿಗೂ ಸಮಾನಲ್ಲ: ವಂಡರ್ ಕಿಡ್ ತಂದೆ ಅಚ್ಚರಿ ಹೇಳಿಕೆ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ ಅವರು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಸಮಸ್ತಿಪುರದ ಈ ಬಾಲಕನಿಗೆ ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಈ ನಡುವೆ ಇದೀಗ ಪುತ್ರ ವೈಭವ್ ಬಗ್ಗೆ ತಂದೆ ಪ್ರತಿಕ್ರಿಯಿಸಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಏಷ್ಯನ್ ಗೇಮ್ಸ್ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದ ನಂತರ, ಬಿಹಾರದ ಸಮಸ್ತಿಪುರದಲ್ಲಿರುವ ಅವರ ಮನೆಗೆ ಮಾಧ್ಯಮಗಳು ಮತ್ತು ಹಿತೈಷಿಗಳ ದಂಡೇ ಹರಿದು ಬರುತ್ತಿದೆ. ಹಾಗೆಯೇ ಇದೀಗ ಎನ್ಡಿಟಿವಿ ನಡೆಸಿದ ವಿಶೇಷ ಸಂದರ್ಶನದಲ್ಲಿ ವೈಭವ್ ತಂದೆ ಸಂಜೀವ್ ಸೂರ್ಯವಂಶಿ ಅವರು ಮಾತನಾಡಿದ್ದಾರೆ.

ಸಂತಸ ಹಂಚಿಕೊಂಡ ವೈಭವ್ ತಂದೆ
ವೈಭವ್ ಭಾರತ ತಂಡಕ್ಕೆ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ತಂದೆ ಸಂಜೀವ್ ಭಾವುಕರಾಗಿದ್ದಾರೆ. 'ಇದು ನಮ್ಮ ಇಡೀ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಮತ್ತು ದೊಡ್ಡ ಕನಸು ನನಸಾದ ಕ್ಷಣ. ತಂಡದ ಆಯ್ಕೆ ಪ್ರಕಟವಾಗುವ ಮುನ್ನ ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ವೈಭವ್ ಸದ್ಯ ಶ್ರೀಲಂಕಾದಲ್ಲಿ ತರಬೇತಿಯಲ್ಲಿದ್ದಾನೆ. ಯಾವುದೇ ಆತಂಕ ಬೇಡ, ನೀನು ಶ್ರಮಪಟ್ಟಿದ್ದೀಯಾ, ಒಳ್ಳೆಯದೇ ಆಗುತ್ತದೆ,' ಎಂದು ನಾನು ಅವನಿಗೆ ಧೈರ್ಯ ತುಂಬಿದ್ದೆ,' ಎಂದು ಸಂತಸ ಹಂಚಿಕೊಂಡಿದ್ದಾರೆ.
'ದಿಗ್ಗಜರ ಜೊತೆ ಹೋಲಿಕೆ ಬೇಡ'
15ನೇ ವಯಸ್ಸಿಗೆ ಭಾರತ ತಂಡ ಸೇರುವ ಮೂಲಕ ವೈಭವ್ ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಅಂತಲೇ ಹೆಸರುವಾಸಿಯಾಗಿರಯವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಸಚಿನ್ ಮತ್ತು ಸರ್ ಡಾನ್ ಬ್ರಾಡ್ಮನ್ಗೆ ಹೋಲಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವೈಭ್ ತಂದೆ ಸಂಜೀವ್, 'ವೈಭವ್ನನ್ನು ಆ ಮಹಾನ್ ಆಟಗಾರರಿಗೆ ಹೋಲಿಸುವುದು ಸರಿಯಲ್ಲ. ಆ ದಿಗ್ಗಜರು ದಶಕಗಳ ಕಾಲ ಉನ್ನತ ಮಟ್ಟದಲ್ಲಿ ದೇಶಕ್ಕಾಗಿ ಆಡಿದವರು. ವೈಭವ್ ಇನ್ನೂ ವೃತ್ತಿಜೀವನದ ಆರಂಭದಲ್ಲಿದ್ದಾನೆ, ಅವರ ಕಾಲಿನ ಧೂಳಿಗೂ ಅವನು ಸಮನಲ್ಲ. ಇಂತಹ ಹೋಲಿಕೆಗಳು ಈಗ ಬೇಡ,' ಎಂದು ಮನವಿ ಮಾಡಿಕೊಂಡಿದ್ದಾರೆ.
'ವೈಭವ್ ಯಾರನ್ನೂ ಅನುಕರಿಸುವುದಿಲ್ಲ'
'ಬ್ರಿಯಾನ್ ಲಾರಾ ಎಡಗೈ ಬ್ಯಾಟರ್, ವೈಭವ್ ಕೂಡ ಎಡಗೈ ಆಟಗಾರನೇ. ನನಗೆ ಲಾರಾ ಅವರ ಬ್ಯಾಟಿಂಗ್ ಅಂದರೆ ತುಂಬಾ ಇಷ್ಟ, ಹಾಗಾಗಿ ನಾನು ಅವನಿಗೆ ಲಾರಾ ಅವರ ವೀಡಿಯೊಗಳನ್ನು ತೋರಿಸುತ್ತಿದ್ದೆ. ಅವನು ಕೂಡ ಲಾರಾ, ಯುವರಾಜ್ ಸಿಂಗ್ ಮತ್ತು ಇತರ ಅನೇಕ ಕ್ರಿಕೆಟಿಗರ ವೀಡಿಯೊಗಳನ್ನು ನೋಡಿದ್ದಾನೆ. ಆದರೆ ವೈಭವ್ ಯಾರನ್ನೂ ಅನುಕರಿಸದೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕ್ರಿಕೆಟ್ ಆಡುತ್ತಾನೆ,' ಎಂದು ತಂದೆ ಹೆಮ್ಮೆಯಿಂದ ಹೇಳಿದ್ದಾರೆ.
'ಮೂರೂ ಮಾದರಿಯಲ್ಲೂ ಆಡಬೇಕು'
'ಅವನಿಗೆ ಕ್ರಿಕೆಟ್ನ ಮೂರೂ ಮಾದರಿಗಳಲ್ಲೂ (ಟೆಸ್ಟ್, ಒನ್ಡೇ, ಟಿ20) ಆಡಬೇಕು ಎಂಬ ಆಸೆಯಿದೆ. ನೀವು ಐಪಿಎಲ್ನಲ್ಲಿ ಅವನ ಆಕ್ರಮಣಕಾರಿ ಆಟವನ್ನು ನೋಡಿದ್ದೀರಿ. ಆದರೆ ಅವನು 50 ಓವರ್ಗಳ ಪಂದ್ಯವೊಂದರಲ್ಲಿ 332 ರನ್ ಕೂಡ ಬಾರಿಸಿದ್ದಾನೆ. ಅವನಿಗೆ ಟೆಸ್ಟ್ ಕ್ರಿಕೆಟ್ ಅಂದರೂ ಅಷ್ಟೇ ಇಷ್ಟ,' ಎಂದು ಹೇಳಿದ್ದಾರೆ.
ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ರಹಸ್ಯ ಬಯಲು
ಬುಮ್ರಾ ಅಥವಾ ಪ್ಯಾಟ್ ಕಮಿನ್ಸ್ ನಂತಹ ವಿಶ್ವದ ಶ್ರೇಷ್ಠ ಬೌಲರ್ಗಳ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಧೈರ್ಯ ವೈಭವ್ಗೆ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜೀವ್, 'ಅದು ಅವನದೇ ಆದ ತಂತ್ರ. ಚಿಕ್ಕವನಿದ್ದಾಗ ದೊಡ್ಡ ಹುಡುಗರು ಅವನನ್ನು ಮಗು ಎಂದು ಕರೆದು ಲೇವಡಿ ಮಾಡುತ್ತಿದ್ದರು. ಆಗ ಎದುರಾಳಿ ತಂಡದ ಅತ್ಯಂತ ಪ್ರಮುಖ ಬೌಲರ್ನನ್ನೇ ಗುರಿಯಾಗಿಸಿಕೊಂಡು ವೈಭವ್ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆಯುತ್ತಿದ್ದ. ಮೊದಲೇ ಅವರ ಮುಖ್ಯ ಬೌಲರ್ಗೆ ಸಿಕ್ಸರ್ ಹೊಡೆದರೆ, ಉಳಿದ ಬೌಲರ್ಗಳು ನನ್ನ ಮೇಲೆ ಸವಾರಿ ಮಾಡಲು ಹೆದರುತ್ತಾರೆ ಎಂದು ಅವನು ಹೇಳುತ್ತಿದ್ದ. ಜನರು ತನ್ನನ್ನು ವಯಸ್ಸಿನಿಂದ ಅಳೆಯಬಾರದು, ಆಟದಿಂದ ಗುರುತಿಸಬೇಕು ಎಂಬುದು ಅವನ ಹಠ,' ಎಂದಿದ್ದಾರೆ.
'ತಂಡ ಗೆದ್ದರೆ ಯಶಸ್ಸು ತಾನಾಗಿಯೇ ಸಿಗುತ್ತದೆ'
'ಬಿಹಾರದ ಪೋಷಕರು ಸಾಮಾನ್ಯವಾಗಿ ಮಕ್ಕಳಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಮಗ ರನ್ ಗಳಿಸಿದಾಗ ನಮಗೆ ಖುಷಿಯಾಗುತ್ತದೆ, ಆದರೆ ಅದಕ್ಕಿಂತ ಮುಖ್ಯವಾಗಿ ಅವನು ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಬೇಕು. ತಂಡ ಗೆದ್ದರೆ ರನ್ಗಳು ಮತ್ತು ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ,' ಎಂದು ಸಂಜೀವ್ ಸೂರ್ಯವಂಶಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೊನೆಯದಾಗಿ ವೈಭವ್ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಇಡೀ ದೇಶ, ವಿಶ್ವದ ಕ್ರಿಕೆಟ್ ಅಭಿಮಾನಿಗಳು, ದಿಗ್ಗಜರ ಆಸೆ ಕೂಡ ಇದೇ ಆಗಿದೆ.












Click it and Unblock the Notifications