ಕೇವಲ 440 ಎಸೆತಗಳಲ್ಲಿ 1,000 ರನ್.. ಕ್ರಿಕೆಟ್ ಲೆಜೆಂಡ್ಸ್ ದಾಖಲೆ ಪುಡಿಗಟ್ಟಿದ ಪುಟ್ಟ ಬಾಲಕ ವೈಭವ್
Vaibhav Sooryavanshi: ಮುಲ್ಲನ್‌ಪುರ್‌ನಲ್ಲಿ ಶುಕ್ರವಾರ (ಮೇ 29) ನಡೆದ ಐಪಿಎಲ್ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲನುಭವಿಸಿ ಈ ಬಾರಿಯ ಟೂರ್ನಿಯಿಂದಲೇ ಹೊರಬಿದ್ದಿತು. ಸೋತರೂ ಸಹ ಈ ಪಂದ್ಯದ ಮೂಲಕ ಆರ್‌ಆರ್ ತಂಡದ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಐಪಿಎಲ್ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ರಾಜಸ್ಥಾನ್ ರಾಯಲ್ಸ್ ತಂಡವು ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಎದೆಗುಂದದೆ ವೈಭವ್ ಸೂರ್ಯವಂಶಿ ಒಬ್ಬರೇ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಏಕಾಂಗಿ ಹೋರಾಟ ನಡೆಸಿದರು. ಸ್ಫೋಟಕ ಇನ್ನಿಂಗ್ಸ್ ಆಡಿದ ಅವರು ಕೇವಲ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳ ನೆರವಿನಿಂದ 96 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ಶತಕ ಗಳಿಸುವ ಅವಕಾಶವನ್ನು ಕೈಚೆಲ್ಲಿದರು.

ಶತಕ ಮಿಸ್ ಮಾಡಿಕೊಂಡರೂ ಮಿಂಚಿದ ವೈಭವ್
ವೈಭವ್ ಶತಕ ಮಿಸ್ ಮಾಡಿಕೊಂಡರೂ ಅವರ ಈ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಒಂದು ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 13ನೇ ಓವರ್‌ನಲ್ಲೇ 118 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ವೈಭವ್ ಜವಾಬ್ದಾರಿಯುತ ಆಟ ಮುಂದುವರೆಸಿ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಫೈನಲ್ ಟಿಕೆಟ್ ಪಡೆದ ಜಿಟಿ
ವೈಭವ್ ಸೂರ್ಯವಂಶಿಗೆ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. ಜಡೇಜಾ ಅವರು ಮೊಣಕೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೂ ಸಹ 35 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಡೊನೊವನ್ ಫೆರೇರಾ ಕೇವಲ 11 ಎಸೆತಗಳಲ್ಲಿ ಅಜೇಯ 38 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 210ರ ಗಡಿ ದಾಟಿಸಿದರು. ಆದರೆ ಕೊನೆಗೆ ಆರ್‌ಆರ್ ನೀಡಿದ 215 ರನ್‌ಗಳ ಗುರಿಯನ್ನು ಮುಟ್ಟಿದ ಜಿಟಿ ಫೈನಲ್ ಪ್ರವೇಶಿಸಿತು. ಮತ್ತೊಂದೆಡೆ ಈ ಸೋಲಿನ ನಡುವೆಯೂ ವೈಭವ್ ಹೊಸ ದಾಖಲೆ ನಿರ್ಮಾಣ ಮಾಡಿದರು.
1,000 ರನ್‌ಗಳ ಗಡಿ ದಾಟಿದ ವೈಭವ್
ಇದು ಐಪಿಎಲ್‌ನಲ್ಲಿ ಸೂರ್ಯವಂಶಿ ಆಡಿದ 23ನೇ ಪಂದ್ಯವಾಗಿದ್ದು, ಅವರು ಈ ಟೂರ್ನಿಯಲ್ಲಿ 1,000 ರನ್‌ಗಳ ಗಡಿಯನ್ನೂ ದಾಟಿದರು. ಈ ಪಂದ್ಯದ ಮೂಲಕ ಸೂರ್ಯವಂಶಿ ಅವರ ಐಪಿಎಲ್ ರನ್‌ಗಳ ಸಂಖ್ಯೆ 1,028ಕ್ಕೆ ತಲುಪಿತು. ಈ ರನ್‌ಗಳನ್ನು ಅವರು 44.69 ರ ಸರಾಸರಿ ಮತ್ತು 228.95ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿ ದಾಖಲೆ ಮಾಡಿದ್ದಾರೆ.
ಅತಿ ಕಡಿಮೆ ಎಸೆತಗಳಲ್ಲಿ 1,000 ರನ್
ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1,000 ರನ್‌ಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯವಂಶಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಇವರು ಈ ಸಾಧನೆ ಮಾಡಲು ಕೇವಲ 440 ಎಸೆತಗಳನ್ನು ತೆಗೆದುಕೊಂಡರೆ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಂಡ್ರೆ ರಸೆಲ್ 545 ಎಸೆತಗಳನ್ನು ತೆಗೆದುಕೊಂಡಿದ್ದರು.
ಐಪಿಎಲ್‌ನಲ್ಲಿ ಕಡಿಮೆ ಎಸೆತಗಳಲ್ಲಿ 1,000 ರನ್ ಗಳಿಸಿದವರು
* ವೈಭವ್ ಸೂರ್ಯವಂಶಿ - 440 ಎಸೆತಗಳು
* ಆಂಡ್ರೆ ರಸೆಲ್ - 545 ಎಸೆತಗಳು
* ಟಿಮ್ ಡೇವಿಡ್ - 560 ಎಸೆತಗಳು
* ಟ್ರಾವಿಸ್ ಹೆಡ್ - 575 ಎಸೆತಗಳು
* ಫಿಲ್ ಸಾಲ್ಟ್ - 575 ಎಸೆತಗಳು
* ಹೆನ್ರಿಚ್ ಕ್ಲಾಸೆನ್ - 594 ಎಸೆತಗಳು
* ವಿರೇಂದ್ರ ಸೆಹ್ವಾಗ್ - 604 ಎಸೆತಗಳು
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದ್ದರು. ಆ ಅಮೋಘ ಇನ್ನಿಂಗ್ಸ್‌ನ ಆತ್ಮವಿಶ್ವಾಸದೊಂದಿದೆ ಅವರು ಕ್ವಾಲಿಫೈಯಲ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ಆಡಿ ಗಮನ ಸೆಳೆದರು.
ಸನ್‌ರೈಸರ್ಸ್ ಹೈದರಾಬಾದ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 12 ಸಿಕ್ಸರ್‌ಗಳನ್ನು ಸಿಡಿಸಿದ್ದ ಅವರು, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದರು. ಈ ಮೂಲಕ ಕೇವಲ ಎರಡು ಪ್ಲೇಆಫ್ ಪಂದ್ಯಗಳಲ್ಲೇ ಅವರ ಒಟ್ಟು ಸಿಕ್ಸರ್‌ಗಳ ಸಂಖ್ಯೆ 19ಕ್ಕೆ ಏರಿದೆ. ಇದು ಐಪಿಎಲ್ ಒಂದೇ ಸೀಸನ್‌ನ ಪ್ಲೇಆಫ್ ಪಂದ್ಯಗಳಲ್ಲಿ ಯಾವೊಬ್ಬ ಬ್ಯಾಟರ್ ಮಾಡದ ಅತ್ಯಧಿಕ ಸಿಕ್ಸರ್‌ಗಳ ದಾಖಲೆಯಾಗಿದೆ.
ಒಂದೇ ಸೀಸನ್‌ನ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರು
* ವೈಭವ್ ಸೂರ್ಯವಂಶಿ - 19 ಸಿಕ್ಸ್ (2026)
* ವೃದ್ಧಿಮಾನ್ ಸಹಾ - 11 ಸಿಕ್ಸ್ (2014)
* ಶುಭಮನ್ ಗಿಲ್ - 11 ಸಿಕ್ಸ್ (2023)
* ರಜತ್ ಪಾಟಿದಾರ್ - 10 ಸಿಕ್ಸ್ (2022)
* ರಜತ್ ಪಾಟಿದಾರ್ - 9 ಸಿಕ್ಸ್ (2026)












Click it and Unblock the Notifications