RCB Unbox Event: ಅಪ್ಪುಗೆ ವಿಶೇಷ ಗೌರವ; ಹೊಸ ನಾಯಕನಿಗೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ
ಐಪಿಎಲ್ 2025ರ ಆವೃತ್ತಿಗೆ ಕೆಲವೇ ದಿನ ಇರುವಾಗ ಆರ್‌ಸಿಬಿ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದಲ್ಲಿ ಮೈದಾನ ಭರ್ತಿಯಾಗುತ್ತದೆ, ಆದರೆ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಕೂಡ ಇಡೀ ಮೈದಾನ ಭರ್ತಿಯಾಗಿತ್ತು. ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಖಜನೆ ಸಿಕ್ಕಿತು.
ಮಾರ್ಚ್ 17ರಂದೇ ಅನ್‌ಬಾಕ್ಸ್ ಕಾರ್ಯಕ್ರಮ ಇದ್ದುದ್ದರಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಕೂಡ ಇದ್ದ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೃಹತ್ ಪರದೆ ಮೇಲೆ ಪ್ರೀತಿಯ ಅಪ್ಪುಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ ಕನ್ನಡಮಯ
ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಹಾಡುಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಕನ್ನಡ ಬಾವುಟ ಹಿಡಿದ ನೂರಾರು ನೃತ್ಯಗಾರರು ಕುಣಿದಿದ್ದು ಮೈದಾನದಲ್ಲಿದ್ದ ಕನ್ನಡಿಗರಲ್ಲಿ ರೋಮಾಂಚನ ಉಂಟುಮಾಡಿತ್ತು. ಸಂಚಿತ್ ಹೆಗ್ಡೆ, ಸವಾರಿ ಬ್ಯಾಂಡ್, ಆಲ್ ಒಕೆ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ರಜತ್ ಪಟಿದಾರ್ ಗೆ ಕೊಹ್ಲಿ ಸಂದೇಶ
ಈ ಬಾರಿ ಆರ್ ಸಿಬಿ ತಂಡದ ನಾಯಕನಾಗಿ ನೇಮಕವಾಗಿರುವ ರಜತ್ ಪಟಿದಾರ್ ಗೆ ಮಾಜಿ ನಾಯಕ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಶೇಷ ಸಂದೇಶ ನೀಡಿದರು. ನೀನು ಉತ್ತಮ ನಾಯಕನಾಗುವ ನಂಬಿಕೆ ನಮಗೆ ಇದೆ, ನಮ್ಮೆಲ್ಲರ ಸಹಕಾರ ನಿನಗೆ ಇರಲಿದೆ ಎಂದು ಹೇಳುವ ಮೂಲಕ ಹೊಸ ನಾಯಕನಿಗೆ ಧೈರ್ಯ ತುಂಬಿದ್ದಾರೆ.
ಆರ್ ಸಿಬಿ ತಂಡದ ಆಟಗಾರರ ಅಭ್ಯಾಸವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಸಿಕ್ಸ್ ಹೊಡೆಯುವ ಸ್ಪರ್ಧೆಯಲ್ಲಿ ರೊಮಾರಿಯೋ ಶೆಫರ್ಡ್ ಎರಡು ಸಿಕ್ಸರ್ ಬಾರಿಸಿದ್ದು ಎರಡೂ ಬಾರಿಯೂ ಚೆಂಡು ಮೈದಾನದಿಂದ ಹೊರಗಡೆ ಹೋಗಿದ್ದು ವಿಶೇಷ. ಕನ್ನಡಿಗ ಮನೋಜ್ ಭಾಂಡಗೆ ಕೂಡ ಭರ್ಜರಿ ಸಿಕ್ಸರ್ ಬಾರಿಸಿ ಗಮನ ಸೆಳೆದರು.
ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್ ಗಾಯಗೊಂಡಿದ್ದು ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನುವ ವದಂತಿಗಳ ನಡುವೆ ಇಬ್ಬರೂ ಕೂಡ ತಂಡವನ್ನು ಸೇರಿಕೊಂಡಿದ್ದು ತಂಡದ ಬಲವನ್ನು ಹೆಚ್ಚಿಸಿದೆ. ಮಾರ್ಚ್ 22ರಂದು ನಡೆಯುವ ಕೆಕೆಆರ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಇಬ್ಬರೂ ಫಿಟ್ ಆಗಿದ್ದಾರೆ.
2025ರ ಐಪಿಎಲ್‌ಗೆ ಆರ್ ಸಿಬಿ ತಂಡ
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಟಿಮ್ ಡೇವಿಡ್, ಲುಂಗಿ ಎಂಗಿಡಿ, ಜೋಶ್ ಹೇಜಲ್‌ವುಡ್, ಸ್ವಪ್ನಿಲ್ ಸಿಂಗ್, ಸ್ವಸ್ತಿಕ್ ಚಿಕಾರ, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಕ್ ದಾರ್, ಸುಯಾಶ್ ಶರ್ಮಾ, ನುವಾನ್ ತುಷಾರ, ಅಭಿನಂದನ್ ಸಿಂಗ್, ಮೋಹಿತ್ ರಾಥಿ.












Click it and Unblock the Notifications